15ನೇ ಹಣಕಾಸು ಆಯೋಗದಡಿ ಕರ್ನಾಟಕಕ್ಕೆ ಮೀಸಲಾದ 8,000 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದನ್ನು ಬಿಡುಡೆ ಮಾಡಬೇಕು ಎಂದು ರಾಜ್ಯಸಭೆಯಲ್ಲಿ ಸಂಸದ ಸಯ್ಯದ್ ನಾಸೀರ್ ಹುಸೇನ್ ಆಗ್ರಹಿಸಿದ್ದಾರೆ.
ಶೂನ್ಯವೇಳೆಯಲ್ಲಿ ಮಾತನಾಡಿದ ನಾಸೀರ್ ಹುಸೇನ್, 15ನೇ ಹಣಕಾಸು ಆಯೋಗದಡಿ ನೀಡಬೇಕಿದ್ದ ಹಣ ಬಾಕಿ ಉಳಿಸಿಕೊಂಡ ವಿಚಾರ ಪ್ರಸ್ತಾಪಿಸಿ, 6,000 ಗ್ರಾಮ ಪಂಚಾಯಿತಿಗಳಿಗೆ ಮೀಸಲಾದ 2,133 ಕೋಟಿ ರೂ., ನರೇಗಾ ಯೋಜನೆಯಡಿ 1,066 ಕೋಟಿ ರೂ. ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ 6,976 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದಾಗಿ ಮಾಹಿತಿ ನೀಡಿದರು.
ಕರ್ನಾಟಕದ 6,000 ಗ್ರಾಮ ಪಂಚಾಯಿತಿಗಳಿಗೆ ಮೀಸಲಾದ 2,133 ಕೋಟಿಗಳಿಗೂ ಹೆಚ್ಚು ಇನ್ನೂ ಬಾಕಿ ಇದೆ. ರಾಜ್ಯವು ಅದಕ್ಕೆ ಸಂಬಂಧಿಸಿದ ಎಲ್ಲ ಆಡಳಿತ ಪ್ರಕ್ರಿಯೆ ಪೂರೈಸಿದ್ದರೂ, ಮೊದಲ ಕಂತಿನ 1,092 ಕೋಟಿಗಳನ್ನು ಕೂಡ ಬಿಡುಗಡೆ ಮಾಡಿಲ್ಲ. ಹಣವನ್ನು ಹೀಗೆ ನಿರಂತರವಾಗಿ ತಡೆಹಿಡಿಯುವುದು ನ್ಯಾಯಸಮ್ಮತವಲ್ಲ, ಇದು ಗ್ರಾಮೀಣ ಆಡಳಿತಕ್ಕೆ ಹಾನಿಕಾರಕ ಎಂದು ಹೇಳಿದರು.
ಹಣ ಬಿಡುಗಡೆಯಾಗದೆ ಪಂಚಾಯಿತಿಗಳು ನೈರ್ಮಲ್ಯ ಕಾರ್ಮಿಕರು ಮತ್ತು ಸ್ಥಳೀಯ ಆಡಳಿತ ಸಿಬ್ಬಂದಿ ಸೇರಿದಂತೆ ಅಗತ್ಯ ಸಿಬ್ಬಂದಿ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಗಳು, ಒಳಚರಂಡಿ, ನೈರ್ಮಲ್ಯ ಮತ್ತು ಬೀದಿ ದೀಪಗಳ ನಿಯಮಿತ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಹಲವು ಪಂಚಾಯಿತಿಗಳು ತಮ್ಮ ಖಾತೆಗಳಲ್ಲಿ ಮೂಲಭೂತ ವೆಚ್ಚಗಳನ್ನು ಭರಿಸಲು ಯಾವುದೇ ಹಣ ಹೊಂದಿಲ್ಲ. ಹೀಗಾಗಿ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


