ಕರ್ನಾಟಕ ಸರಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸಿ ಬಿಜೆಪಿ ನಾನಾ ವಾಗ್ದಾಳಿ ನಡೆಸುತ್ತ, ಸಮೀಕ್ಷೆಯಲ್ಲಿ ಭಾಗವಹಿಸದಂತೆ ಸಾರ್ವಜನಿಕರನ್ನು ಪ್ರಚೋದಿಸುತ್ತ ಬಂದಿರುವ ಮಧ್ಯೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ.
ನಾವು ಹಿಂದುಳಿದ ವರ್ಗದ ಯಾವ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 10 ರಂದು ಸುಧಾಮೂರ್ತಿ ದಂಪತಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ವಯಂ ದೃಢೀಕರಣ ಪತ್ರ ಬರೆದಿದ್ದಾರೆ. ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತೇವೆ. ನಾನು ಮತ್ತು ನನ್ನ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ನಮ್ಮ ಮಾಹಿತಿಯನ್ನು ನೀಡಲು ನಿರಾಕರಿಸಿದ್ದೇನೆ ಎಂದು ಈ ಮೂಲಕ ದೃಢೀಕರಿಸುತ್ತೇವೆ ಎಂದು ದಂಪತಿ ತಿಳಿಸಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ಸುಧಾ ಮೂರ್ತಿ ಅವರ ನಿವಾಸವಿದ್ದು, ಇಬ್ಬರೂ ಕರ್ನಾಟಕದ ನಿವಾಸಿಗಳಾಗಿದ್ದಾರೆ. ಕರ್ನಾಟಕ ಹೈಕೋರ್ಟ್ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಗಣತಿದಾರರು ಸಾರ್ವಜನಿಕರಿಂದ ಉತ್ತರಗಳನ್ನು ಒತ್ತಾಯಿಸುವಂತಿಲ್ಲ ಎಂದು ತೀರ್ಪು ನೀಡಿರುವುದರಿಂದ ದಂಪತಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಡಿಸಿಎಂ ಡಿಕೆ ಶಿವಕುಮಾರ್ ಅವರಲ್ಲಿ ಪ್ರಶ್ನಿಸಿದಾಗ, ಈ ವಿಚಾರದಲ್ಲಿ ಯಾರಿಗೂ ಒತ್ತಾಯವಿಲ್ಲ, ಇಷ್ಟ ಇದ್ದವರು ಭಾಗವಹಿಸಿ ಮಾಹಿತಿ ನೀಡಬಹುದು ಎಂದು ಉತ್ತರಿಸಿದ್ದಾರೆ.