Saturday, December 06, 2025
Menu

ಹೈನುಗಾರರು, ಹೂ ಬೆಳೆಗಾರರ ಕಲ್ಯಾಣಕ್ಕೆ 2 ಮಂಡಿಸಿದ ಸಂಸದ ಡಾ.ಕೆ ಸುಧಾಕರ್

MP Sudhakar

ಅನ್ನದಾತ ರೈತರ ಕಲ್ಯಾಣಕ್ಕಾಗಿ ಸಂಸದ ಡಾ.ಕೆ.ಸುಧಾಕರ್ ಅವರು ಲೋಕಸಭೆಯಲ್ಲಿ ಎರಡು ಮಹತ್ವದ ಖಾಸಗಿ ಮಸೂದೆಗಳನ್ನು ಮಂಡಿಸಿದ್ದಾರೆ. ಈ ಮಸೂದೆಗಳು ಕೃಷಿ ಆರ್ಥಿಕತೆ ಹಾಗೂ ಗ್ರಾಮೀಣ ಕುಟುಂಬಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ.

1. ಹೈನುಗಾರರ (ಕಲ್ಯಾಣ) ಮಸೂದೆ, 2024

ಈ ಮಸೂದೆಯು ಭಾರತದ 7 ಕೋಟಿ ಡೇರಿ ಆಧಾರಿತ ಕೃಷಿ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯ ನೆರವು ನೀಡುತ್ತದೆ. ಈ ಕುಟುಂಬಗಳಲ್ಲಿ ಹೆಚ್ಚಿನವರು ಸಣ್ಣ, ಅತಿ ಸಣ್ಣ ರೈತರು ಮತ್ತು ಮಹಿಳೆಯರಿದ್ದಾರೆ.

ಪ್ರಮುಖ ಅಂಶಗಳು

ಸಂಸದರು, ತಜ್ಞರು ಮತ್ತು ರೈತ ಪ್ರತಿನಿಧಿಗಳನ್ನು ಒಳಗೊಂಡ ಡೇರಿ ರೈತರ ಕಲ್ಯಾಣ ಸಮಿತಿಯ ರಚನೆ
ಡೇರಿ ರೈತರ ಕಲ್ಯಾಣ ನಿಧಿ ಸ್ಥಾಪನೆ
ಡೇರಿ ರೈತರಿಗೆ ತಲಾ ₹50 ಲಕ್ಷ ಅಪಘಾತ ವಿಮೆ
ಡೇರಿ ರೈತರಿಗೆ ತಲಾ ₹10 ಲಕ್ಷ ಆರೋಗ್ಯ ವಿಮೆ
ಸರ್ಕಾರಿ ಯೋಜನೆಗಳಡಿ ಖರೀದಿಸಿದ ಜಾನುವಾರುಗಳಿಗೆ ಉಚಿತ ವಿಮೆ
ಡೇರಿ ರೈತರಿಗೆ ಮಾಸಿಕ ಪಿಂಚಣಿ
ಅಂದಾಜು ವೆಚ್ಚ: ವಾರ್ಷಿಕ ₹10,000 ಕೋಟಿ
ಹವಾಮಾನದ ವೈಪರೀತ್ಯದಿಂದ ಜಾನುವಾರುಗಳ ಮೇಲೆ ಆಗುವ ಪರಿಣಾಮ, ಬೆಲೆ ಏರಿಳಿತ, ಹೆಚ್ಚುವ ವೆಚ್ಚಗಳು ಮತ್ತು ಸಾಮಾಜಿಕ ಭದ್ರತೆಯ ಸವಾಲುಗಳನ್ನು ಈ ಮಸೂದೆ ಪರಿಹರಿಸುತ್ತದೆ.

2. ರಾಷ್ಟ್ರೀಯ ಪುಷ್ಪಕೃಷಿ ಮಂಡಳಿ ಮಸೂದೆ, 2024

ಭಾರತದ ಹೂವಿನ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಈ ಮಸೂದೆ ನೆರವಾಗುತ್ತದೆ. ಹೆಚ್ಚಿನ ಮೌಲ್ಯದ ಹೂವು ಉತ್ಪಾದನೆ ಮತ್ತು ರಫ್ತು ಹೆಚ್ಚಿಸಿ ದೇಶವನ್ನು ಹೂ ಮಾರುಕಟ್ಟೆಯ ಜಾಗತಿಕ ಕೇಂದ್ರವಾಗಿ ಮಾಡಲು ಇದು ಉತ್ತೇಜನ ನೀಡುತ್ತದೆ.

ಪ್ರಮುಖ ಅಂಶಗಳು
ರಾಷ್ಟ್ರೀಯ ಪುಷ್ಪಕೃಷಿ ಮಂಡಳಿಯ ರಚನೆ
ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಪ್ರಧಾನ ಕಚೇರಿ ಸ್ಥಾಪನೆ, ದೇಶದ ವಿವಿಧೆಡೆ ಪ್ರಾದೇಶಿಕ ಕಚೇರಿಗಳು
ವೈಜ್ಞಾನಿಕ ಕೃಷಿಗೆ ಒತ್ತು, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅಭಿವೃದ್ಧಿ
ರಫ್ತು ಪ್ರಮಾಣೀಕರಣಕ್‌ಕೆ ಸಹಾಯ, ಸಂಶೋಧನೆ ಮತ್ತು ಬೆಲೆ ಶಿಫಾರಸು
ರಾಷ್ಟ್ರೀಯ ಪುಷ್ಪಕೃಷಿ ಮಂಡಳಿ ನಿಧಿಯ ರಚನೆ
ಅಂದಾಜು ವಾರ್ಷಿಕ ವೆಚ್ಚ: ₹1,500 ಕೋಟಿ, ಒಂದು ಬಾರಿ ವೆಚ್ಚ: ₹50 ಕೋಟಿ

ಭಾರತವು ಈಗಾಗಲೇ ₹717.83 ಕೋಟಿ ಮೌಲ್ಯದ ಸುಮಾರು 19,677 ಮೆಟ್ರಿಕ್ ಟನ್ ಪುಷ್ಪ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಈ ಮಸೂದೆಯು ಉತ್ಪಾದನಾ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಈ ಕುರಿತು ಮಾತನಾಡಿದ ಸಂಸದ ಡಾ.ಕೆ.ಸುಧಾಕರ್‌, “ನಮ್ಮ ಹೈನುಗಾರರು ಮತ್ತು ಹೂವು ಬೆಳೆಗಾರರು ಗ್ರಾಮೀಣ ಭಾರತದ ಬೆನ್ನೆಲುಬಾಗಿದ್ದಾರೆ. ಈ ಮಸೂದೆಗಳು ಅವರ ಆದಾಯವನ್ನು ಭದ್ರಪಡಿಸಿ, ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಹೊಸ ಆರ್ಥಿಕ ಅವಕಾಶಗಳನ್ನು ನೀಡುತ್ತದೆ. ಸರಿಯಾದ ಸಾಂಸ್ಥಿಕ ಚೌಕಟ್ಟು ನೀಡುವುದರ ಮೂಲಕ, ಭಾರತವು ಪುಷ್ಪಕೃಷಿಯಲ್ಲಿ ಜಾಗತಿಕ ನಾಯಕನಾಗಬಹುದು. ಹಾಗೆಯೇ ಪ್ರತಿ ಹೈನುಗಾರರು ಸಾಮಾಜಿಕ ಭದ್ರತೆ ಮತ್ತು ಘನತೆಯನ್ನು ಪಡೆಯಬಹುದು” ಎಂದು ತಿಳಿಸಿದ್ದಾರೆ.

ರೈತರ ಕಲ್ಯಾಣ, ಗ್ರಾಮೀಣ ಉದ್ಯಮಶೀಲತೆ ಮತ್ತು ಭಾರತದ ಕೃಷಿ ಪರಿವರ್ತನೆಯ ವಿಚಾರದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಅವರ ಬದ್ಧತೆಯನ್ನು ಈ ಎರಡೂ ಮಸೂದೆಗಳು ಪ್ರತಿಬಿಂಬಿಸುತ್ತವೆ.

Related Posts

Leave a Reply

Your email address will not be published. Required fields are marked *