ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಮೊದಲಿನಂತೆಯೇ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು, ಅದಕ್ಕೆ ಪೂರಕವಾಗಿ ನಿಯಮ ರೂಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಸುಮಾರು 500 ಮೀಟರ್ ದೂರದಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ವಿಮಾನದಿಂದ ಇಳಿದು ಬಂದ ಪ್ರಯಾಣಿಕರು ನಡೆದುಕೊಂಡು ಹೋಗಿ ಟ್ಯಾಕ್ಸಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಾಧಿಕಾರದ ಈ ಹೊಸ ಪಾರ್ಕಿಂಗ್ ನಿಯಮದ ವಿರುದ್ಧ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಟ್ಯಾಕ್ಸಿ ಚಾಲಕರ ಸಂಘದ ಮನವಿಯ ಮೇರೆಗೆ ಮಂಗಳವಾರ ಸಂಸದ ಡಾ.ಕೆ.ಸುಧಾಕರ್ ಅವರು ಚಾಲಕರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಹಾಗೂ ಸುತ್ತಮುತ್ತಲಿನ ಊರುಗಳ 18 ರಿಂದ 20 ಸಾವಿರ ಯುವಕರು ಟ್ಯಾಕ್ಸಿ ಚಲಾಯಿಸುತ್ತಿದ್ದು, ಇವರನ್ನೇ ನಂಬಿಕೊಂಡು ಸುಮಾರು 1 ಲಕ್ಷ ಕುಟುಂಬ ಸದಸ್ಯರು ಇದ್ದಾರೆ. ಖಾಸಗಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು 15-20 ವರ್ಷಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ. ಇವರಲ್ಲಿ ಅನೇಕರು ಪ್ರಯಾಣಿಕರ ಜೊತೆ ನೇರ ಸಂಪರ್ಕ ಹೊಂದಿದ್ದು, ಅನೇಕ ವರ್ಷಗಳ ಪರಿಚಯದ ಮೂಲಕ ಸೇವೆ ನೀಡುತ್ತಿದ್ದಾರೆ.
ಕಳೆದ ಡಿಸೆಂಬರ್ 8 ರಿಂದ 500 ಮೀಟರ್ ದೂರದಲ್ಲಿ ಚಾಲಕರಿಗೆ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ. ಇದರಿಂದ ಸಮಸ್ಯೆ ಹೆಚ್ಚಿದೆ. ಈ ಹಿಂದೆ ನೀಡಿದ್ದ ಸ್ಥಳವನ್ನೇ ಈ ಚಾಲಕರಿಗೆ ನೀಡಬೇಕು. ಖಾಸಗಿ ಕಂಪನಿಗಳು 1,200-1,500 ರೂ. ದರ ನಿಗದಿ ಮಾಡಿದರೆ, ಈ ಚಾಲಕರು ಇನ್ನೂ ಕಡಿಮೆ ದರಕ್ಕೆ ಸೇವೆ ನೀಡುತ್ತಾರೆ. ಆದ್ದರಿಂದ ಇಲ್ಲಿ ಎಲ್ಲರಿಗೂ ಅವಕಾಶ ನೀಡಬೇಕಿದೆ. ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ದಟ್ಟಣೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಕನಿಷ್ಠ ಪ್ರಮಾಣದಲ್ಲಿ ಬಳಕೆದಾರರ ಶುಲ್ಕ ಪಡೆದು ಸ್ಥಳ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಅಗ್ರಿಗೇಟರ್‌ಗಳು ಎಲ್ಲ ಕಡೆ ಇದ್ದು, ಯಾರ ಸೇವೆ ಬೇಕೆಂದು ಗ್ರಾಹಕರು ತೀರ್ಮಾನ ಮಾಡುತ್ತಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಧಾನ ಸಭೆಯಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ಒಂದು ವಾರದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ. ಖಾಸಗಿ ಟ್ಯಾಕ್ಸಿ ಚಾಲಕರಲ್ಲಿ ಎಲ್ಲರೂ ಕನ್ನಡಿಗರು ಹಾಗೂ ಸ್ಥಳೀಯ ನಿವಾಸಿಗಳು ಆಗಿದ್ದಾರೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಾಲಕರೇ ಇಲ್ಲಿದ್ದಾರೆ. ಇವರಲ್ಲಿ ಬಹಳಷ್ಟು ಜನರು ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ. ಆದ್ದರಿಂದ ಪ್ರಾಧಿಕಾರವು ಚಾಲಕರ ಜೊತೆ ಸಮನ್ವಯದಿಂದ ವರ್ತಿಸಬೇಕು. ಚಾಲಕರಿಗೆ ತೊಂದರೆಯಾಗದಂತೆ ಮೂರು ನಾಲ್ಕು ದಿನಗಳಲ್ಲಿ ಒಂದು ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕೂಡ ಸಭೆ ಮಾಡಲಿದ್ದಾರೆ. ನಾನು ಸಹ ಅವರೊಂದಿಗೆ ಖುದ್ದಾಗಿ ಮಾತನಾಡುತ್ತೇನೆ. ಅಗತ್ಯವಿದ್ದರೆ ನಾಗರಿಕ ವಿಮಾನಯಾನ ಸಚಿವರಾದ ಕೆ.ರಾಮಮೋಹನ್ ನಾಯ್ಡು ಅವರಿಗೆ ಮಾಹಿತಿ ನೀಡಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಹೋಲಿಕೆ ಸರಿಯಲ್ಲ
ಸುದೀರ್ಘ ಅವಧಿಯಿಂದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವ ಸಿದ್ದರಾಮಯ್ಯನವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ. ಆದರೆ ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ. 2013 ರಲ್ಲಿ ಸಿಎಂ ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡಿದ್ದರು. ಆದರೆ 2023 ರಿಂದ ನೀಡುತ್ತಿರುವ ಆಡಳಿತ ಜನರಿಗೆ ಸಾಕಾಗಿದೆ. ಸಿದ್ದರಾಮಯ್ಯನವರಿಗೆ ಇನ್ನೂ ಸಿಎಂ ಆಗಿರಬೇಕೆಂಬ ಬಯಕೆ ಇದೆ. ಆದರೆ ಈ ಸರ್ಕಾರ ಹೋಗಲಿ ಎಂದೇ ಜನರು ಬಯಸುತ್ತಿದ್ದಾರೆ. ದೇವರಾಜು ಅರಸು ತಂದ ಸುಧಾರಣೆಗಳನ್ನು ಬೇರೆ ಯಾರೂ ತಂದಿಲ್ಲ. ಅವರು ಬಡವರಿಗೆ ಭೂಮಿ ನೀಡಿದ್ದರು. ಅವರು ನಿಜವಾದ ಬದ್ಧತೆ ಇದ್ದ ಹಿಂದುಳಿದ ವರ್ಗದ ನಾಯಕ. ಅವರ ದಾರಿಯಲ್ಲಿ ಸಿದ್ದರಾಮಯ್ಯನವರು ನಡೆದಿದ್ದರೆ ಚೆನ್ನಾಗಿರುತ್ತಿತ್ತು. ದೇವರಾಜು ಅರಸು ಅವರು ಜನರ ಬದುಕಿಗೆ ಊಟ ನೀಡಿದ್ದರು. ಒಂದು ಹಬ್ಬಕ್ಕೆ ನೀಡುವ ಊಟಕ್ಕೂ ಜೀವನಕ್ಕೆ ನೀಡುವ ಊಟಕ್ಕೂ ವ್ಯತ್ಯಾಸವಿದೆ ಎಂದರು.


