ಜಿಎಸ್‌ಟಿ 2.0 ಸುಧಾರಣೆಗಳು ಸೆಪ್ಟೆಂಬರ್ 22 ರಿಂದ ಜಾರಿಯಾಗಿವೆ. ಈ ಸುಧಾರಣೆಗಳ ಲಾಭ ಜನರಿಗೆ ನೇರವಾಗಿ ತಲುಪುವಂತೆ ಮಾಡಲು ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರದ ಅಂಗಡಿ, ಮುಂಗಟ್ಟು ಮತ್ತು ವಿಮಾ ಕಚೇರಿಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ನಡೆಸಿದ್ದಾರ
ಚಿಕ್ಕಬಳ್ಳಾಪುರದ ಎಲ್‌ಐಸಿ ಕಚೇರಿ, ದಿನಸಿ ಅಂಗಡಿಗಳು, ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಶೋರೂಮ್‌ಗಳಿಗೆ ಹಾಗೂ ಉದ್ಯಮ ಸಂಸ್ಥೆಗಳಿಗೆ ಭೇಟಿ ನೀಡಿದ ಸಂಸದ ಡಾ.ಕೆ.ಸುಧಾಕರ್, ಸ್ಥಳೀಯ ನಾಗರಿಕರು, ವ್ಯಾಪಾರಿಗಳು, ಸೇವಾ ಪೂರೈಕೆದಾರರೊಂದಿಗೆ ಚರ್ಚೆ ನಡೆಸಿದರು. ಹೊಸ ಜಿಎಸ್‌ಟಿಯಿಂದಾಗಿ ಕುಟುಂಬದ ಖರ್ಚುಗಳಲ್ಲಿ ಇಳಿಕೆ, ಅಗತ್ಯ ವಸ್ತುಗಳ ಬೆಲೆ ಇಳಿಕೆ ಮತ್ತು ಎಲ್ಲರೂ ಆರೋಗ್ಯ ವಿಮೆಯನ್ನು ಪಡೆಯುವ ಬಗ್ಗೆ ಅವರು ಜನರಿಗೆ ವಿವರಿಸಿದರು.
ಈ ಹಿಂದೆ 12% ತೆರಿಗೆಯಡಿ ಇದ್ದ ಸುಮಾರು 99% ಸರಕುಗಳು ಈಗ 5% ಸ್ಲ್ಯಾಬ್ ಅಡಿಯಲ್ಲಿ ಬರುತ್ತಿವೆ. ಇದರಿಂದಾಗಿ ಅನೇಕ ಗೃಹೋಪಯೋಗಿ ವಸ್ತುಗಳ ವೆಚ್ಚ ಕಡಿಮೆಯಾಗಿ ಕುಟುಂಬಗಳಿಗೆ ನೆರವಾಗಿದೆ ಎಂದು ಅವರು ವಿವರಿಸಿದರು.
ಒಟ್ಟಾರೆಯಾಗಿ, ಜಿಎಸ್‌ಟಿ ಅಡಿ ಬರುವ 99% ಸರಕು ಮತ್ತು ಸೇವೆಗಳು ಈಗ 0%, 5% ಅಥವಾ 18% ಸ್ಲ್ಯಾಬ್‌ಗಳಡಿ ಬರುತ್ತಿವೆ. ಕೇವಲ 1% ನಷ್ಟು ಸರಕುಗಳಿಗೆ ಮಾತ್ರ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಆರೋಗ್ಯ ವಿಮೆ ಹಾಗೂ ಜೀವ ವಿಮೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪ್ರತಿ ಕುಟುಂಬಗಳು ಜೀವನ ಹಾಗೂ ಆರೋಗ್ಯ ವಿಷಯದಲ್ಲಿ ಭದ್ರತೆ ಪಡೆಯಬಹುದು ಎಂದು ಅವರು ಹೇಳಿದರು.
ಈ ಬಗ್ಗೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, “ಈ ಸುಧಾರಣೆಗಳು ಪ್ರತಿ ಕುಟುಂಬಕ್ಕೂ ತೃಪ್ತಿ ಹಾಗೂ ಸಮಾಧಾನ ತಂದಿವೆ. ದಿನಸಿ, ಗೃಹೋಪಯೋಗಿ ವಸ್ತುಗಳು ಮತ್ತು ದಿನನಿತ್ಯದ ಬಳಕೆಯ ಸರಕುಗಳ ಜಿಎಸ್‌ಟಿ 12% ರಿಂದ 5% ಗೆ ಇಳಿದಿರುವುದರಿಂದ ಕುಟುಂಬದ ಖರ್ಚು ಕಡಿಮೆಯಾಗಿದೆ. ಅಂದರೆ ಒಂದು ಕುಟುಂಬ ದಿನಬಳಕೆಯ ವಸ್ತುಗಳ ಖರೀದಿಯಲ್ಲಿ ತಿಂಗಳಿಗೆ 7% ರಿಂದ 12% ರಷ್ಟು ಹಣ ಉಳಿತಾಯ ಮಾಡಬಹುದು. ವಿಮಾ ಯೋಜನೆಗಳ ಮೇಲಿನ ಜಿಎಸ್‌ಟಿ ತೆಗೆದುಹಾಕುವ ಮೂಲಕ ಲಕ್ಷಾಂತರ ಕುಟುಂಬಗಳು ಆರೋಗ್ಯ ಮತ್ತು ಭವಿಷ್ಯವನ್ನು ಸುರಕ್ಷಿತ ವಾಗಿರಿಸಿಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ” ಎಂದು ಹೇಳಿದರು.
ಎಲ್ಲ ಅಂಗಡಿಯವರು, ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರು ಈ ಸುಧಾರಣೆಗಳ ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಮನವಿ ಮಾಡಿದರು.
“ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತೆರಿಗೆಯನ್ನು ಸರಳ, ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ಮಾಡಲು ಜಿಎಸ್‌ಟಿ 2.0 ಸುಧಾರಣೆ ತಂದಿದ್ದಾರೆ. ಜನರ ಮೇಲಿದ್ದ ಹೊರೆಯನ್ನು ಸರ್ಕಾರ ಕಡಿಮೆ ಮಾಡಿ ತನ್ನ ಹೊಣೆಯನ್ನು ನಿರ್ವಹಣೆ ಮಾಡಿದೆ. ಈಗ ಚಿಕ್ಕಬಳ್ಳಾಪುರದ ಪ್ರತಿ ವ್ಯಾಪಾರಿ ಮತ್ತು ಸೇವಾ ಪೂರೈಕೆದಾರರು ಈ ಲಾಭವನ್ನು ತಡ ಮಾಡದೆ ನಮ್ಮ ಜನರಿಗೆ ವರ್ಗಾಯಿಸುವ ಮೂಲಕ ಜವಾಬ್ದಾರಿಯನ್ನು ನಿಭಾಯಿಸಬೇಕು” ಎಂದು ಅವರು ಹೇಳಿದರು.
ಈ ಜಾಗೃತಿ ಅಭಿಯಾನಕ್ಕೆ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಿದ್ದಕ್ಕಾಗಿ ಮತ್ತು ವಿಮೆಯನ್ನು ತೆರಿಗೆ ಮುಕ್ತ ಮಾಡಿದ್ದಕ್ಕೆ ಜನರು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಾಮಾನ್ಯ ಜನರಿಗೆ ಇನ್ನಷ್ಟು ಪ್ರಯೋಜನಗಳನ್ನು ನೀಡಲು ಹಾಗೂ ವ್ಯಾಪಾರಿಗಳಿಗೆ ಸಹಕಾರ ನೀಡಲು, ಕೇಂದ್ರ ಸರ್ಕಾರವು ತೆರಿಗೆ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳೀಕರಣಗೊಳಿಸಲಿದೆ. ಹಾಗೆಯೇ ಡಿಜಿಟಲ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಸಂಸದ ಡಾ.ಕೆ.ಸುಧಾಕರ್ ವರ್ತಕರು ಹಾಗೂ ಉದ್ಯಮದವರಿಗೆ ಭರವಸೆ ನೀಡಿದರು.