Menu

64 ಗಂಟೆಗಳಲ್ಲಿ 1.2 ಲಕ್ಷ ಚದರಡಿ ಕೈಗಾರಿಕಾ ಶೆಡ್ ನಿರ್ಮಾಣ, ಮೌಂಟ್ ರೂಫಿಂಗ್ ವಿಶ್ವದಾಖಲೆ!

world records

ಬೆಂಗಳೂರು: ತ್ವರಿತ ಗತಿ ಮತ್ತು ಉತ್ಕೃಷ್ಟ ಗುಣಮಟ್ಟದ ಕೈಗಾರಿಕಾ ಶೆಡ್ ನಿರ್ಮಾಣಕ್ಕೆ ಹೆಸರಾಗಿರುವ ಮೌಂಟ್ ರೂಫಿಂಗ್ ಅಂಡ್ ಸ್ಟ್ರಕ್ಚರ್ಸ್, ಶಿರಾದಲ್ಲಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಕೇವಲ 64 ಗಂಟೆಗಳಲ್ಲಿ 1.2 ಲಕ್ಷ ಚದರ ಅಡಿ ವಿಸ್ತಾರದ ಪ್ರೀ-ಎಂಜಿನಿಯರ್ಡ್ ಕಟ್ಟಡ ನಿರ್ಮಿಸುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದೆ.

ಈ ಸಂಸ್ಥೆಯು ಶಿರಾದಲ್ಲಿನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯ ನಿವೇಶನದಲ್ಲಿ ಸಕ್ರಿಯವಾಗಿರುವ ದಾಶ್ ಪಿ.ವಿ. ಟೆಕ್ನಾಲಜೀಸ್ ಸಂಸ್ಥೆಗೆ ಈ ಕಾಮಗಾರಿಯನ್ನು ಮಾಡಿಕೊಟ್ಟಿದೆ

ಇದು ಕರ್ನಾಟಕದ ಕೈಗಾರಿಕಾ ಕಾರ್ಯಪರಿಸರದ ದಕ್ಷತೆಗೆ ನೂತನ ಸಾಕ್ಷಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುಧವಾರ ಇಲ್ಲಿನ ಖಾಸಗಿ ಹೋಟೆಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, ಮೌಂಟ್ ರೂಫಿಂಗ್ ಅಂಡ್ ಸ್ಟ್ರಕ್ಚರ್ಸ್ ಸಂಸ್ಥೆಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪುರಸ್ಕಾರ ಪತ್ರ ಪ್ರದಾನ ಮಾಡಿ ಮಾತನಾಡಿದರು.

ಶಿರಾದಲ್ಲಿ ದಾಶ್ ಪಿ.ವಿ. ಟೆಕ್ನಾಲಜೀಸ್ 346.35 ಕೋಟಿ ಹೂಡಿಕೆ ಮಾಡಿದ್ದು, ಅಲ್ಲಿ ತನ್ನ ಸೋಲಾರ್ ಪಿವಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಸಂಸ್ಥೆಯು ಅಲ್ಲಿ 2,000 ಜನರಿಗೆ ಉದ್ಯೋಗವನ್ನು ನೀಡಲಿದೆ. ಈಗ ಇದಕ್ಕೆ ಬೇಕಾದ ಕೈಗಾರಿಕಾ ಶೆಡ್ ಅನ್ನು ಮೌಂಟ್ ರೂಫಿಂಗ್ ಅನ್ನು 450 ಟನ್ ಉಕ್ಕು ಬಳಸಿ, ಕ್ಷಿಪ್ರಗತಿಯಲ್ಲಿ ನಿರ್ಮಿಸಿದೆ. ಇದರ ಭಾಗವಾಗಿ 12 ಸಾವಿರ ಚದರ ಅಡಿಯ ಚಾವಣಿ ಮತ್ತು 4,000 ಚದರ ಅಡಿಗೆ ಶೀಟಿಂಗ್ ಕೂಡ ಮಾಡಲಾಗಿದೆ. ಸಂಸ್ಥೆಯು ತುಮಕೂರಿನಲ್ಲಿರುವ ತನ್ನ ಸ್ಥಾವರದಲ್ಲಿ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದು ಕರ್ನಾಟಕಕ್ಕೆ ಹೆಮ್ಮೆಯ ಗರಿ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಭರತ್ ಬೊಮ್ಮಾಯಿ, ದಾಶ್ ಪಿ.ವಿ. ಟೆಕ್ನಾಲಜೀಸ್ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ರೆಡ್ಡಿ ಮಾತನಾಡಿದರು.

ಮೌಂಟ್ ರೂಫಿಂಗ್ ಸಂಸ್ಥೆಯ ಸಂಸ್ಥಾಪಕ ಉಮೇದ್ ಸಿಂಗ್, ವ್ಯವಸ್ಥಾಪಕ ನಿರ್ದೇಶಕ ಷೇರ್ ಸಿಂಗ್, ರೋಹನ್ ಬಿರಾದಾರ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *