ವಿವಾಹಿತ ಮಹಿಳೆಯೊಬ್ಬಳು ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಜೊತೆಯಲ್ಲೇ ಹೋಗಬೇಕೆಂದು ತನ್ನ ಮೂವರು ಮಕ್ಕಳಿಗೆ ಆಹಾರದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿರುವ ಘಟನೆ ಲಾಹೋರ್‌ನಿಂದ 200 ಕಿ.ಮೀ ದೂರ ಪಂಜಾಬ್ ಪ್ರಾಂತ್ಯದ ಗುಜರಾತ್ ಜಿಲ್ಲೆಯ ಸರೈ ಅಲಮ್‌ಗಿರ್‌ನಲ್ಲಿ ನಡೆದಿದೆ.
ಕೊಲೆಗಾರ್ತಿ ತಾಯಿ ಸಿದ್ರಾ ಬಶೀರ್ ಮತ್ತು ಆಕೆಯ ಪ್ರಿಯಕರ ಬಾಬರ್ ಹುಸೇನ್‌ನನ್ನು ಬಂಧಿಸಲಾಗಿದೆ. ಇಬ್ಬರು ಹೆಣ್ಣುಮಕ್ಕಳು ಮತ್ತು ಮೂರರಿಂದ ಏಳು ವರ್ಷದೊಳಗಿನ ಮಗನಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಕತ್ತು ಹಿಸುಕಿ ಕೊಲ್ಲಲಾಗಿದೆ. ಇಬ್ಬರೂ ಒಂದೂವರೆ ವರ್ಷಗಳ ಹಿಂದೆ ಭೇಟಿಯಾಗಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಮಹಿಳೆ ಪದೇ ಪದೆ ಪತಿಯಿಂದ ವಿಚ್ಛೇದನ ಕೇಳಿ ಜಗಳವಾಡುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ಒಮರ್ ಫಾರೂಕ್ ಹೇಳಿದ್ದಾಗಿ ಸುದ್ದಿ ಸಂಸ್ಥೆ ತಿಳಿಸಿದೆ. ಮಕ್ಕಳು ಜೀವಂತವಾಗಿರುವಾಗ ಮದುವೆಯಾಗಲು ಸಾಧ್ಯವಿಲ್ಲ ಎಂದು ಅವರಿಬ್ಬರು ಮಕ್ಕಳನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಆರೋಪಿಗಳಿಬ್ಬರೂ ಅದೇ ಕಾರಣಕ್ಕಾಗಿ ಮಕ್ಕಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಣ್ಣಿನ ಚಾಟ್‌ನಲ್ಲಿ ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಬೆರೆಸಿ ಮಕ್ಕಳಿಗೆ ನೀಡಿದ್ದರು. ಮಕ್ಕಳು ಗಾಢ ನಿದ್ರೆಗೆ ಜಾರಿದ ನಂತರ ಕತ್ತು ಹಿಸುಕಲಾಗಿದೆ.
ಆರೋಪಿಗಳಿಬ್ಬರೂ ಮೃತದೇಹಗಳನ್ನು ನಿರ್ಜನ ಸ್ಥಳದಲ್ಲಿ ಸುಟ್ಟು ನಂತರ ಹೂತು ಹಾಕಿದ್ದಾರೆ. ಸಿದ್ರಾ ಅವರ ಪತಿಯು ಪತ್ನಿ ಮತ್ತು ಅವರ ಮೂವರು ಮಕ್ಕಳು ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ ನಂತರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಕೃತ್ಯ ಬಯಲಿಗೆಳೆದಿದ್ದಾರೆ.


