Wednesday, September 10, 2025
Menu

ರಾಣೇಬೆನ್ನೂರಿನಲ್ಲಿ ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಸಾಯಿಸಿದ ತಾಯಿ

ರಾಣೇಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವಿನ ಉಸಿರುಗಟ್ಟಿಸಿ ತಾಯಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮೃತ ಮಗುವನ್ನು ಪ್ರಿಯಾಂಕಾ (4) ಎಂದು ಗುರುತಿಸಲಾಗಿದೆ. ರಾಣೇಬೆನ್ನೂರು ನಗರದ ಎಕೆಜಿ ಕಾಲನಿಯ ಗಂಗಮ್ಮ ಗುತ್ತಲ (36) ಹಾಗೂ ಗೌರಿಶಂಕರ ನಗರದ ಅಣ್ಣಪ್ಪ ಮಡಿವಾಳರ (40)ಮಗುವನ್ನು ಕೊಲೆಗೈದಿರುವ ಆರೋಪಿಗಳು.

ಆರೋಪಿ ಗಂಗಮ್ಮ ಎರಡು ತಿಂಗಳ ಹಿಂದೆ ಪತಿಯನ್ನು ಬಿಟ್ಟು ಮಗಳನ್ನು ಕರೆದುಕೊಂಡು ಅಣ್ಣಪ್ಪನ ಜೊತೆ ಗುಡ್ಡದ ಆನ್ವೇರಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ ಈ ನಡುವೆ ಅಕ್ರಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಿದ್ದಾಳೆಂದು ಕೊಲೆಗೆ ಸಂಚು ರೂಪಿಸಿದ್ದಳು.

ಆ.5ರಂದು ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಹಾವೇರಿ ತಾಲೂಕಿನ ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಬಳಿ ಸುಟ್ಟು ಹಾಕಲು ಆರೋಪಿಗಳಿಬ್ಬರೂ ಪ್ರಯತ್ನಿಸಿದ್ದರು. ಮಗುವಿನ ಅರ್ಧದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಗುತ್ತಲ ಠಾಣೆ ಪೊಲೀಸರು ಅಪರಿಚಿತ ಶವ ಎಂದು ಪರಿಗಣಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಸ್ವಲ್ಪ ದಿನಗಳ ಬಳಿಕ ಆರೋಪಿ ಗಂಗಮ್ಮಳ ಪತಿ ಮಂಜುನಾಥ ಮಗುವನ್ನು ನೀಡುವಂತೆ ಬೇಡಿಕೊಂಡಿದ್ದನು. ನೀನು ಅವನ ಜೊತೆಗೆ ಇರು, ಆದರೆ ನನ್ನ ಮಗಳನ್ನು ನನಗೆ ಕೊಟ್ಟುಬಿಡು ಎಂದು ಪಟ್ಟುಹಿಡಿದ್ದಿದ್ದ. ಆಗ ಗಂಗಮ್ಮ ಮಗಳು ಮೈಸೂರಿನಲ್ಲಿದ್ದಾಳೆ, ಅವಳಿಗೆ ಹುಷಾರಿಲ್ಲ, ಆಸ್ಪತ್ರೆಯಲ್ಲಿದ್ದಾಳೆ ಎಂದು ಕಥೆ ಕಟ್ಟಿ ಒಂದು ತಿಂಗಳು ಕಾಲ ಕಳೆದಿದ್ದಳು.

ಬೇಸತ್ತ ಪತಿ ಮಂಜುನಾಥ ಮಗಳನ್ನು ಕೊಡಿಸುವಂತೆ ಶಹರ ಠಾಣೆ ಪಿಎಸ್‌ಐ ಗಡ್ಡಪ್ಪ ಗುಂಜುಟಗಿ ಮೊರೆ ಹೋಗಿದ್ದಾನೆ. ಪಿಎಸ್‌ಐ ಗಂಗಮ್ಮ ಮತ್ತು ಅಣ್ಣಪ್ಪನನ್ನು ಕರೆತಂದು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *