ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ್ ಮೃತಪಟ್ಟ ಬಾಣಂತಿ. ಮದುವೆಯಾಗಿ ಹನ್ನೆರಡು ವರ್ಷದ ಬಳಿಕ ಗರ್ಭವತಿಯಾಗಿದ್ದ ಅಂಜಲಿಯನ್ನು ಹೆರಿಗೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯಾದ ಸಂದರ್ಭದಲ್ಲಿ ಆರೋಗ್ಯವಾಗಿಯೇ ಇದ್ದ ಅಂಜಲಿ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
ಲೋ ಬಿಪಿಯಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಅಂಜಲಿ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಆಸ್ಪತ್ರೆಯ ಮುಂಭಾಗದಲ್ಲಿ ಕುಟುಂಬಸ್ಥರು ಸೇರಿದ್ದು, ಎಪಿಎಂಸಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.