ಮಗುವನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಅಸು ನೀಗಿರುವ ಘಟನೆ ಬೆಂಗಳೂರಿನ ವಿವೇಕನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ಸಂಗೀತಾ (37) ಮತ್ತು ಮಗ ಪಾರ್ಥ (8) ಮೃತಪಟ್ಟವರು.
ಸಂಗೀತಾ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡ್ತಿದ್ದರು. ಇಬ್ಬರು ಮಕ್ಕಳಿದ್ದು, ಅದೇ ಶಾಲೆಗೆ ಸೇರಿಸಿದ್ದರು. ಪತಿ ಪ್ರಸಾದ್ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ 6:30ಕ್ಕೆ ಮಗನೊಂದಿಗೆ ಶಾಲೆಗೆ ಕೆಲಸಕ್ಕೆಂದು ಹೋಗುವಾಗ ರಸ್ತೆ ದಾಟಬೇಕಾದರೆ ಖಾಸಗಿ ಕಾಲೇಜಿನ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ತಾಯಿ-ಮಗನ ಪ್ರಾಣ ಹೋಗಿದೆ.
ಸ್ಥಳಕ್ಕೆ ಅಶೋಕ ನಗರ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತ ಎಸಗಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು
ಭಟ್ಕಳದ ವೆಂಕಟಾಪುರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಬಿಲಾಲ್ (15) ಹಾಗೂ ಆಯಾನ್ (20) ಮೃತಪಟ್ಟವರು.
ಬಿಲಾಲ್ ಸ್ಥಳದಲ್ಲೇ ಅಸು ನೀಗಿದ್ದು, ಚಾಲನೆ ಮಾಡುತ್ತಿದ್ದ ಆಯಾನ್ ಗಾಯಗೊಂಡಿದ್ದು, ಆತನನ್ನು ಉಡುಪಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ನಡೆದಿದ್ದು, ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


