ತುಮಕೂರು; ಹಿರೇಹಳ್ಳಿ ಸಮೀಪದ ಸಿಂಗನಹಳ್ಳಿ ಕಾಲೊನಿಯಲ್ಲಿ ತಾಯಿ ಮತ್ತು ಮಕ್ಕಳಿಬ್ಬರು ಮನೆಯಲ್ಲಿನ ನೀರಿನತೊಟ್ಟಿಗೆ(ಸಂಪ್) ಬಿದ್ದು ಸಾವನ್ನಪ್ಪಿದ್ದಾರೆ.
ತಾಯಿ ವಿಜಯಲಕ್ಷ್ಮಿ (26) ಮತ್ತು ಐದು ವರ್ಷದ ಅವಳಿ ಮಕ್ಕಳಾದ ಚೇತನ ಮತ್ತು ಚೈತನ್ಯ ಮೃತರಾದವರು.
ಮಂಗಳವಾರ ಸಂಜೆ 4.14ರ ಸುಮಾರಿನಲ್ಲಿ ಮಾಹಿತಿ ದೊರೆತ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮೂವರ ಮೃತದೇಹಗಳನ್ನು ನೀರಿನ ತೊಟ್ಟಿನಿಂದ ಹೊರತೆಗೆದು ಕ್ಯಾತ್ಸಂದ್ರ ಪೊಲೀಸರ ವಶಕ್ಕೆ ನೀಡಿದ್ದು,ಜಿಲ್ಲಾ ಆಸ್ಪತ್ರೆಯಲ್ಲಿ ಮೃತದೇಹಗಳ ಪೋಸ್ಟ್ ಮಾರ್ಟಂ ನಡೆಯುತ್ತಿದೆ.
ಒಂದು ಮಾಹಿತಿಯ ಪ್ರಕಾರ ಆಟವಾಡುತ್ತಿದ್ದಾಗ ಮಕ್ಕಳು ಮೊದಲು ನೀರಿನ ತೊಟ್ಟಿಗೆ ಬಿದ್ದರೆಂದು ಅವರನ್ನು ರಕ್ಷಿಸುವ ಸಲುವಾಗಿ ತೊಟ್ಟಿಗೆ ಇಳಿದ ತಾಯಿಯೂ ಮೃತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪೋಸ್ಟ್ ಮಾರ್ಟಂ ನಂತರವಷ್ಟೆ ಖಚಿತ ಕಾರಣ ತಿಳಿದು ಬರಬೇಕಿದೆ.
ಗಂಡ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ. ಕೆಲಸದಿಂದ ಬಂದ ಗಂಡ ಹೆಂಡತಿ-ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದು, ಪತ್ತೆಯಾಗಿರಲಿಲ್ಲ. ಕೊನೆಯಲ್ಲಿ ನೀರಿನ ತೊಟ್ಟಿ ತೆರೆದಿರುವುದನ್ನು ಗಮನಿಸಿದಾಗ ಮೂವರ ಶವಗಳು ಪತ್ತೆಯಾಗಿದೆ.


