ಚೆನ್ನೈ: ನೀಟ್ ಪರೀಕ್ಷೆಯನ್ನು ಬಲವಾಗಿ ವಿರೋಧಿಸುವ ತಮಿಳುನಾಡಿನಲ್ಲಿ ಅಪರೂಪದ ವಿದ್ಯಮಾನ ನಡೆದಿದೆ. ತಾಯಿ-ಮಗಳು ಇಬ್ಬರೂ ವೈದ್ಯಕೀಯ ಕೋರ್ಸ್ ದಾಖಲಾತಿಗೆ ಅಗತ್ಯವಿರುವ ನೀಟ್ ಪರೀಕ್ಷೆ ಪಾಸಾಗಿದ್ದಾರೆ.
ವಿಶೇಷವೆಂದರೆ, ಕುಟುಂಬ ನೆಲೆಸಿರುವ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲೇ ಎಂಬಿಬಿಎಸ್ ಸೀಟು ದೊರೆತಿದೆ. ತಾಯಿ ಅದೇ ಕಾಲೇಜಿನಲ್ಲಿ ಓದಲು ಬಯಸಿದರೆ, ಮಗಳು ಬೇರೆ ರಾಜ್ಯದಲ್ಲಿ ಅಧ್ಯಯನ ಮಾಡಲು ಇಚ್ಛಿಸಿದ್ದಾರೆ.
ಫಿಸಿಯೋಥೆರಪಿಸ್ಟ್ ಆಗಿರುವ ಅಮುತವಲ್ಲಿ ಮಣಿವಣ್ಣನ್ ಮತ್ತು ಆಕೆಯ ಪುತ್ರಿ ಎಂ. ಸಂಯುಕ್ತಾ ಈ ಸಾಧನೆ ಮಾಡಿದವರು.
ಅತಿ ಕಠಿಣ ಎಂದೇ ಹೇಳಲಾಗುವ ನೀಟ್ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಂಪಾದಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಇಬ್ಬರೂ ದಾಪುಗಾಲಿಟ್ಟಿದ್ದಾರೆ.
“ನನ್ನ ಕಾಲೇಜು ದಿನಗಳ ಪಠ್ಯಕ್ಕಿಂತಲೂ ಈಗಿನ ಪಠ್ಯಕ್ರಮ ಬಹಳ ಕಠಿಣವಾಗಿದೆ. ಮಗಳು ಕೂಡ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಪಠ್ಯ ಮತ್ತು ನೋಟ್ಸ್ಗಳನ್ನು ಅಭ್ಯಾಸ ಮಾಡಿದೆ” ಎಂದು 49 ವರ್ಷದ ಅಮುತವಲ್ಲಿ ಮಣಿವಣ್ಣನ್ ನೀಟ್ ಪರೀಕ್ಷೆಯ ಸಿದ್ಧತೆ ಮತ್ತು ಪಠ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.
“ಮಗಳು ನೀಟ್ ಪರೀಕ್ಷೆಗೆ ತಯಾರಿ ನಡೆಸುವುದನ್ನು ಕಂಡು ನನಗೂ ಮಹತ್ವಾಕಾಂಕ್ಷೆ ಚಿಗುರಿತು. ಆಕೆಯೇ ನನಗೆ ಸ್ಫೂರ್ತಿ. ನಾನು ಮಗಳ ಪುಸ್ತಕಗಳನ್ನು ಪಡೆದು ಪರೀಕ್ಷೆಗೆ ತಯಾರಿ ನಡೆಸಿದೆ. ಜೊತೆಗೆ ಆಕೆಯೂ ನನಗೆ ಅಭ್ಯಾಸದಲ್ಲಿ ಸಹಾಯ ಮಾಡಿದಳು. ಈಗ ಇಬ್ಬರೂ ಪಾಸಾಗಿದ್ದೇವೆ. ನನ್ನ ಪತಿಯೂ ತುಂಬಾ ಬೆಂಬಲ ನೀಡಿದರು. ಅವರೇ ನಮಗೆ ನೀಟ್ ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಿದರು” ಎಂದು ಅಮುತವಲ್ಲಿ ಹೇಳಿದರು.
ಸಿಬಿಎಸ್‌ಇ ವಿದ್ಯಾರ್ಥಿನಿಯಾಗಿರುವ ಎಂ. ಸಂಯುಕ್ತಾ ಹೇಳುವಂತೆ, “ತಂದೆ ವಕೀಲರಾಗಿದ್ದಾರೆ. ತಾಯಿ ಫಿಸಿಯೋಥೆರಪಿಸ್ಟ್. ಮೊದಲು ನನಗೆ ವೈದ್ಯಕೀಯ ಕ್ಷೇತ್ರ ಇಷ್ಟವಿರಲಿಲ್ಲ. ತಾಯಿಯ ಅಭ್ಯಾಸದಲ್ಲಿ ನೆರವು ನೀಡುವಾಗ, ನನಗೂ ವೈದ್ಯಕೀಯ ಕ್ಷೇತ್ರಕ್ಕೆ ಬರುವ ಆಸೆ ಬಂದಿತು. ಅದರಂತೆ ಇಬ್ಬರೂ ಕಠಿಣ ಅಭ್ಯಾಸ ಮಾಡಿದೆವು” ಎಂದು ತಮ್ಮ ಅನುಭವ ತಿಳಿಸಿದ್ದಾರೆ.