ನವದೆಹಲಿ: ಹಾಲಿ ಬೆಳೆ ವರ್ಷದಲ್ಲಿ ಭಾರತದ ಅಕ್ಕಿ ಉತ್ಪಾದನೆ ದಾಖಲೆಯ 151 ದಶಲಕ್ಷ ಟನ್‌ಗೆ ತಲುಪಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಆಫ್ ಅಗ್ರಿಕಲ್ಚರ್ (ಯುಎಸ್‌ಡಿಎ) ವರದಿ ಹೇಳಿದೆ.
2025-26ರ ಬೆಳೆ ಮಾರುಕಟ್ಟೆ ವರ್ಷದಲ್ಲಿ (ಸೆಪ್ಟೆಂಬರ್ 2025-ಆಗಸ್ಟ್ 2026) ಭಾರತದ ಅಕ್ಕಿ ಉತ್ಪಾದನೆ ಎಲ್ಲಕ್ಕಿಂತ ಗರಿಷ್ಠವಾದ 151 ಮಿಲಿಯನ್ ಟನ್‌ಗೆ ತಲುಪುವ ನಿರೀಕ್ಷೆಯಿದೆ.
ಮುಂಗಾರು ಮಳೆಯ ಆರಂಭಿಕ ಆಗಮನ, ಭೂಮಿಯ ತೇವಾಂಶ ಹೆಚ್ಚಳ ಮತ್ತು ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಏರಿಕೆ ಇದಕ್ಕೆ ಕಾರಣ ಎನ್ನಲಾಗಿದೆ.
ಮೇ ತಿಂಗಳಲ್ಲಿ, ಯುಎಸ್‌ಡಿಎ 2025-26ರ ಅಕ್ಕಿ ಉತ್ಪಾದನೆಯನ್ನು 148 ಮಿಲಿಯನ್ ಟನ್ ಎಂದು ಅಂದಾಜಿಸಿತ್ತು, ಇದರೊಂದಿಗೆ ಭಾರತವು ೧೪೬ ಮಿಲಿಯನ್ ಟನ್ ಉತ್ಪಾದಿಸಿದ ಚೀನಾವನ್ನು ಮೀರಿಸಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿತು.
ಜೂನ್ ತಿಂಗಳ ಮೌಲ್ಯಮಾಪನವು 2025-26ರಲ್ಲಿ ಬೆಳೆಯ ಗಾತ್ರವು ಇನ್ನೂ ಹೆಚ್ಚಾಗಬಹುದು ಎಂದು ತೋರಿಸುತ್ತದೆ. ಅಕ್ಕಿ ಬಿತ್ತನೆಯ ವಿಸ್ತೀರ್ಣವು 51 ಮಿಲಿಯನ್ ಹೆಕ್ಟೇರ್‌ಗಳಷ್ಟಿರಲಿದೆ ಎಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ ದಾಖಲೆಯ ಗಾತ್ರಕ್ಕೆ ಸಮನಾಗಿದೆ.
ಕಳೆದ ಐದು ವರ್ಷಗಳ ಸರಾಸರಿಗಿಂತ ಶೇ. 7ರಷ್ಟು ಹೆಚ್ಚಾಗಿದೆ. ಒಟ್ಟು ಆಧಾರದಲ್ಲಿ ಇಳುವರಿಯು ಹೆಕ್ಟೇರ್‌ಗೆ 4.44 ಟನ್‌ಗಳಷ್ಟಿರುವ ದಾಖಲೆಯ ಮಟ್ಟವನ್ನು ತಲುಪಲಿದೆ ಎಂದು ಯುಎಸ್‌ಡಿಎ ತಿಳಿಸಿದೆ.
ಭಾರತದ ಸರ್ಕಾರದ ಇತ್ತೀಚಿನ ಮೂರನೇ ಮುಂಗಡ ಅಂದಾಜಿನ ಪ್ರಕಾರ, 2024-25ರ (ಜುಲೈ 2024-ಜೂನ್ 2025) ಅಕ್ಕಿ ಉತ್ಪಾದನೆಯು 149 ಮಿಲಿಯನ್ ಟನ್‌ಗೆ ತಲುಪಿದೆ.
2025-26ರಲ್ಲಿ ಭಾರತವು ವಿಶ್ವ ಮಾರುಕಟ್ಟೆಗೆ ಸುಮಾರು 25 ಮಿಲಿಯನ್ ಟನ್ ಅಕ್ಕಿಯನ್ನು ರಫ್ತು ಮಾಡುವ ನಿರೀಕ್ಷೆಯಿದೆ, ಇದು ಮೇ ತಿಂಗಳಲ್ಲಿ ನಿರೀಕ್ಷಿಸಲಾದ 24 ಮಿಲಿಯನ್ ಟನ್‌ಗಿಂತ ಹೆಚ್ಚಾಗಿದೆ.
ಮುಂಗಾರಿನ ಕೊಡುಗೆ
ಈ ಪರಿಸ್ಥಿತಿಗೆ ನೈಋತ್ಯ ಮುಂಗಾರು ಮಳೆಯ ಶೀಘ್ರ ಆಗಮನ ಮತ್ತು “ಸಾಮಾನ್ಯಕ್ಕಿಂತ ಹೆಚ್ಚಿನ” ಮಳೆಯ ಮುನ್ಸೂಚನೆ ಪ್ರಮುಖ ಕಾರಣವಾಗಿದೆ.
ಏಪ್ರಿಲ್‌ನಲ್ಲಿ ದೀರ್ಘಾವಧಿಯ ಸರಾಸರಿಯ (ಎಲ್‌ಪಿಎ) ಶೇ. 105ರಷ್ಟು ಮಳೆಯಾಗಿತ್ತು. 1971-2020ರ ಅವಧಿಯಲ್ಲಿ ದೇಶಾದ್ಯಂತ ಸರಾಸರಿ 87.6 ಸೆಂಟಿಮೀಟರ್ ಮುಂಗಾರು ಮಳೆ ಬಿದ್ದಿತ್ತು.
ಆದರೆ, ಈಶಾನ್ಯ ಭಾರತದ ಕೆಲವು ಭಾಗಗಳು ಮತ್ತು ಬಿಹಾರವನ್ನು ಹೊರತುಪಡಿಸಿ, ದೇಶದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಈ ವರ್ಷದ ಮುಂಗಾರು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅರುಣಾಚಲ ಪ್ರದೇಶ, ಅಸ್ಸಾಂ, ಮತ್ತು ಮೇಘಾಲಯದಲ್ಲಿ ಮಾತ್ರ “ಸಾಮಾನ್ಯಕ್ಕಿಂತ ಕಡಿಮೆ” ಮಳೆಯಾಗಬಹುದು ಎಂದು ತಿಳಿಸಲಾಗಿದೆ.