ಪರೀಕ್ಷಾರ್ಥ ಸಂಚಾರದ ವೇಳೆ ಮೋನೋ ರೈಲು ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕ್ಯಾಪ್ಟನ್ ಸೇರಿದಂತೆ ಮೂವರು ಸಿಬ್ಬಂದಿ ಗಾಯಗೊಂಡ ಘಟನೆ ಮುಂಬೈನಲ್ಲಿ ಬುಧವಾರ ಸಂಭವಿಸಿದೆ.
ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮೋನೋ ರೈಲು ಸಂಚಾರ ಪರೀಕ್ಷೆ ನಡೆಸಿತ್ತು. ಈ ವೇಳೆ ಮೋನೋ ರೈಲು ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಇದರಿಂದ ಮೇಲಿಂದ ಕೆಳಗೆ ಬೀಳುವ ದುರಂತ ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.
ಬುಧವಾರ ಬೆಳಿಗ್ಗೆ ಮುಂಬೈನ ವಡಾಲಾ ಡಿಪೋದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಾಗಿತ್ತು. ಮೊನೋ ರೈಲಿನಲ್ಲಿ ಸಿಬ್ಬಂದಿ ಹೊರತುಪಡಿಸಿ ಯಾರೂ ಇಲ್ಲದ ಕಾರಣ ಹೆಚ್ಚಿನ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಸಂಸ್ಥೆ ಇದೊಂದು ಸಣ್ಣ ಘಟನೆ ಎಂದು ಹಾರಿಕೆಯ ಉತ್ತರ ನೀಡಿದೆ.
ಪುನರಾವರ್ತಿತ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಸಿಸ್ಟಮ್ ಅಪ್‌ಗ್ರೇಡ್ ಕಾರ್ಯಕ್ಕಾಗಿ ಮುಂದಿನ ಸೂಚನೆ ಬರುವವರೆಗೆ ಸೆಪ್ಟೆಂಬರ್ 20 ರಂದು ಮಹಾನಗರದಲ್ಲಿ ನಿಯಮಿತ ಮೋನೋರೈಲ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ.


