Menu

ಅಯೋಧ್ಯೆಯ ರಾಮಮಂದಿರ ಮೇಲೆ ಕೇಸರಿ ಧ್ವಜ ಹಾರಿಸಲಿರುವ ಮೋದಿ!

ನವದೆಹಲಿ/ಅಯೋಧ್ಯೆ: ಅಯೋಧ್ಯೆಯ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇವಾಲಯದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ.

ಭಗವಾನ್ ರಾಮನ ತೇಜಸ್ಸು ಮತ್ತು ಶೌರ್ಯವನ್ನು ಸಂಕೇತಿಸುವ ವಿಕಿರಣ ಸೂರ್ಯನ ಚಿತ್ರವುಳ್ಳ 10 ಅಡಿ ಎತ್ತರ ಮತ್ತು 20 ಅಡಿ ಉದ್ದದ ತ್ರಿಕೋನ ಧ್ವಜ ಇದಾಗಿದ್ದು, ಅದರ ಮೇಲೆ ಕೋವಿದರ ಮರದ ಚಿತ್ರದೊಂದಿಗೆ ‘ಓಂ’ ಅನ್ನು ಕೆತ್ತಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಹೇಳಿಕೆ ತಿಳಿಸಿದೆ.

ಕೇಸರಿ ಧ್ವಜವು ಘನತೆ, ಏಕತೆ ಮತ್ತು ಸಾಂಸ್ಕೃತಿಕ ನಿರಂತರತೆಯ ಸಂದೇಶ ಸಾರುತ್ತದೆ. ರಾಮ ರಾಜ್ಯದ ಆದರ್ಶಗಳನ್ನು ಸಾಕಾರಗೊಳಿಸುವ ಸಾಧನವಾಗಿದೆ ಎಂದು ಪಿಎಂಒ ತಿಳಿಸಿದೆ.

ನಾಗರಶೈಲಿಯಲ್ಲಿ ಗೋಪುರ ನಿರ್ಮಾಣ: ರಾಮ ಮಂದಿರದ ಮೇಲಿನ ಗೋಪುರವನ್ನು ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅದರ ಮೇಲೆ ಧ್ವಜ ನೆಡಲಾಗುವುದು. ದೇವಾಲಯದ ಸುತ್ತಲೂ ನಿರ್ಮಿಸಲಾದ 800 ಮೀಟರ್ ಪಾರ್ಕೋಟಾ (ಪ್ರದಕ್ಷಿಣೆ ಇರುವ ಜಾಗ)ವನ್ನು ದಕ್ಷಿಣ ಭಾರತದ ವಾಸ್ತುಶಿಲ್ಪ ಸಂಪ್ರದಾಯದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ದೇವಾಲಯದ ವಾಸ್ತುಶಿಲ್ಪದ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಕಚೇರಿ ಹೇಳಿದೆ.

ಅಯೋಧ್ಯೆಯಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ದೇವಿ ಅಹಲ್ಯ, ನಿಶಾದರಾಜ್ ಗುಹಾ ಮತ್ತು ಮಾತಾ ಶಬರಿ ಅವರಿಗೆ ಸಂಬಂಧಿಸಿದ ದೇವಾಲಯಗಳನ್ನು ಹೊಂದಿರುವ ಸಪ್ತಮಂದಿರಕ್ಕೆ ಭೇಟಿ ನೀಡಲಿದ್ದಾರೆ.

ನಂತರ ಶೇಷಾವತಾರ ಮಂದಿರಕ್ಕೆ ತೆರಳುವರು. ನಂತರ ಮಾತಾ ಅನ್ನಪೂರ್ಣ ಮಂದಿರಕ್ಕೂ ಭೇಟಿ ನೀಡಲಿದ್ದಾರೆ. ರಾಮ ದರ್ಬಾರ್ ಗರ್ಭಗೃಹದಲ್ಲಿ ಭಗವಾನ್ ರಾಮನ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ ಎಂದು ಪಿಎಂಒ ಮಾಹಿತಿ ಹಂಚಿಕೊಂಡಿದೆ.

Related Posts

Leave a Reply

Your email address will not be published. Required fields are marked *