Menu

ಎಲ್ಲದರ ಬೆಲೆ ಏರಿಸಿದ ಬಡವರ ವಿರೋಧಿ ಮೋದಿ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಗೊಬ್ಬರ, ಔಷಧಿ, ರಾಗಿ, ಗೋದಿ, ಡೀಸೆಲ್, ಪೆಟ್ರೋಲ್ ಎಲ್ಲದರ ಬೆಲೆ ಆಕಾಶಕ್ಕೇರಿಸಿದ ಮೋದಿ ಭಾರತದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಬೆಲೆ ಏರಿಕೆ ಪರ್ವವನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು. ರಾಜಕೀಯ ಅಂದರೆ ಬರೀ ಅಧಿಕಾರ ಅಲ್ಲ. ಸೈದ್ಧಾಂತಿಕ ಸ್ಪಷ್ಟತೆಯಿಂದ ಜನರ ಪರವಾಗಿ ನಿಂತು ನಿರಂತರ ಹೋರಾಟ ನಡೆಸುವುದೂ ರಾಜಕೀಯ ಬದ್ಧತೆಯೇ ಆಗಿದೆ ಎಂದು ಹೇಳಿದರು.

ಸರ್ಕಾರ ದಿವಾಳಿ ಆಗಿದ್ದರೆ ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂಪಾಯಿ ಪ್ರತೀ ವರ್ಷ ತೆಗೆದಿಡಲು ಸಾಧ್ಯವಾಗುತ್ತಿತ್ತಾ, ಹಾಲಿನ ಬೆಲೆ 4 ರೂ ಹೆಚ್ಚಳ ಮಾಡಿರುವುದು ರೈತರ ಜೇಬಿಗೆ ಹೋಗುತ್ತಿದೆ. ಸರ್ಕಾರಕ್ಕೆ ಬರುತ್ತಿಲ್ಲ. ನೀವು ಗ್ಯಾಸ್ ಬೆಲೆ ಹತ್ತಾರು ಬಾರಿ ಹೆಚ್ಚಿಸಿ ಈಗ ಮತ್ತೆ 50 ರೂ ಹೆಚ್ಚಿಸಿದ್ದೀರಿ. ಈ ಹೆಚ್ಚುವರಿ ಹಣ ಯಾರಿಗೆ ಹೋಗುತ್ತಿದೆ ಹೇಳಿ, ನೀವು ಗ್ಯಾಸ್ ಬೆಲೆ ಹತ್ತಾರು ಬಾರಿ ಹೆಚ್ಚಿಸಿ ಈಗ ಮತ್ತೆ 50 ರೂ ಹೆಚ್ಚಿಸಿದ್ದೀರಿ. ಈ ಹೆಚ್ಚುವರಿ ಹಣ ಯಾರಿಗೆ ಹೋಗುತ್ತಿದೆ ಹೇಳಿ. ಬಿಜೆಪಿ ಯಾವ‌ ಮುಖ ಇಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ಮಾತಾಡುತ್ತಿದೆ, 4ರೂ ಹಾಲಿನ ದರ ಹೆಚ್ಚಿಸಿ ಈ 4 ರೂಪಾಯಿಯನ್ನು ನೇರವಾಗಿ ರೈತರ ಜೇಬಿಗೆ ಹಾಕಿದ್ದೇವೆ,  ಸರ್ಕಾರಕ್ಕೆ ಬರಲ್ಲ ಎಂದರು.

ಸುಳ್ಳೇ ಬಿಜೆಪಿಯ ಮನೆ ದೇವರು. RSS ಸುಳ್ಳಿನ ಮಹಾ ಕಾರ್ಖಾನೆ, ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಸಾವರ್ಕರ್ ಮತ್ತು ಢಾಂಗೆ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಆದರೆ ಕಾಂಗ್ರೆಸ್ ಸೋಲಿಸಿದ್ದು ಎಂದು ಬಿಜೆಪಿ ಬಂಡಲ್ ಬಿಡುತ್ತಿದೆ. ನಾವು ಸುಳ್ಳಿನ ಕಾರ್ಖಾನೆ RSS  ವಿರುದ್ಧ ಸತ್ಯವನ್ನು ದೇಶದ ತುಂಬ ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ನಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಾ ಮೋದಿ ಸರ್ಕಾರ ತನ್ನ ಬಡವರ, ಮಧ್ಯಮ ವರ್ಗ ವಿರೋಧಿತನವನ್ನು ಬಚ್ಚಿಡಲು ಯತ್ನಿಸುತ್ತಿದೆ ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ಸೋನಿಯಾ, ರಾಹುಲ್ ವಿರುದ್ಧ ಆರೋಪ ಪಟ್ಟಿ ಹಾಕಿದ್ದನ್ನು ತೀವ್ರವಾಗಿ ಖಂಡಿಸಿದ ಸಿಎಂ, RSS ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಹೀಗಾಗಿ ಈ RSS ಪರಿವಾರಕ್ಕೆ ಭಾರತದ ಬೆಲೆಯೂ ಗೊತ್ತಿಲ್ಲ. ಸ್ವಾತಂತ್ರ್ಯದ ಬೆಲೆಯೂ ಗೊತ್ತಿಲ್ಲ, RSS ನವರ ದೇಶದ್ರೋಹದ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಮಾದರಿ ದೇಶಾದ್ಯಂತ ನಡೆಸೋಣ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಮಯೂರ್ ಜೈಕುಮಾರ್, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣಭೈರೇಗೌಡ, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಹೆಚ್.ಸಿ ಮಹದೇವಪ್ಪ, ಚಲುವರಾಯ ಸ್ವಾಮಿ, ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಬೋಸರಾಜು, ದರ್ಶನಾಪುರ್, ಎಂ.ಸಿ ಸುಧಾಕರ್, ಭೈರತಿ ಸುರೇಶ್, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರಾದ ಬಿ.ವಿ, ಶ್ರೀನಿವಾಸ್, ಎಂಎಲ್ ಸಿ ನಾರಾಯಣಸ್ವಾಮಿ, ನಾಗರಾಜ್ ಯಾದವ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *