ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ನರೇಂದ್ರ ಮೋದಿ ಅವರ ಸರ್ಕಾರ ಕಟಿಬದ್ಧವಾಗಿ ದುಡಿಯುತ್ತಿದೆ ಎಂದು ಹೇಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಳೆದ ಹತ್ತು ವರ್ಷಗಳಲ್ಲಿ ಈ ರಾಜ್ಯಗಳ ಶ್ರೇಯೋವೃದ್ಧಿಗೆ ಐದೂವರೆ ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾಗಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಎಬಿವಿಪಿ ರಾಷ್ಟ್ರೀಯ ಏಕಾತ್ಮಕಾ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ನಾಗರಿಕ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೂರ್ವದತ್ತ ನೋಡಿ (Look east) ನೀತಿ ಅಡಿಯಲ್ಲಿ ಮೋದಿ ಅವರು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾ ಚಲ ಪ್ರದೇಶ, ಮೇಘಾಲಯ, ಮಣಿಪುರ, ನಾಗಲ್ಯಾಂಡ್, ಸಿಕ್ಕಿಂ , ತ್ರಿಪುರ ಅಭಿವೃದ್ಧಿಗೆ ಕಳೆದ ಎಪ್ಪತ್ತು ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದಾರೆ ಎಂದರು.
ಸಂಪುಟದ ಸಚಿವರಿಗೆ ಆದೇಶ ನೀಡಿರುವ ಮೋದಿ, ಈಶಾನ್ಯ ರಾಜ್ಯಗಳಲ್ಲಿ ಅನುಷ್ಠಾನ ಆಗುತ್ತಿರುವ ಕಾರ್ಯಕ್ರಮ ಗಳನ್ನು ಗಮನವಿಟ್ಟು ಪರಿಶೀಲನೆ ಮಾಡಬೇಕು ಎಂದು ಸೂಚಿಸಿದ್ದಾರೆ. ನಾನೂ ಕಳೆದ ವರ್ಷ ನಾಲ್ಕು ದಿನ ನಾಗಾ ಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಿಗೆ ಭೇಟಿ ನೀಡಿದ್ದೆ. ಕೈಗಾರಿಕೆಗಳ ಪ್ರಗತಿ ಪರಿಶೀಲನೆ ನಡೆಸುವುದರ ಜತೆಗೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದೆ ಎಂದು ಹೇಳಿದರು.
1996ರಲ್ಲಿ ದೇವೇಗೌಡರು ಪ್ರಧಾನಿಯಾಗಿ ಈಶಾನ್ಯ ಭಾಗದ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭವನ್ನು ಸ್ಮರಿಸಿದ ಸಚಿವರು, ಆರು ದಿನ ಆ ರಾಜ್ಯಗಳಲ್ಲಿ ನಿರಂತರ ಪ್ರವಾಸ ಕೈಗೊಂಡಿದ್ದ ದೇವೇಗೌಡರು, ಅಂತಿಮವಾಗಿ ₹7,503.51 ಕೋಟಿ ಬೃಹತ್ ಪ್ಯಾಕೇಜ್ ಘೋಷಿಸಿ ಕೂಡಲೇ ₹6,100 ಕೋಟಿ ಬಿಡುಗಡೆ ಮಾಡಿದ್ದರು. ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಶಕೆ ಶುರುವಾಗಿದ್ದೇ ಆಗ ಎಂದು ಕುಮಾರಸ್ವಾಮಿ ವಿವರಿಸಿದರು.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಅಂತರ್ಗತ ಮಾಡಿಕೊಂಡಿರುವ ಅನನ್ಯ ರಾಷ್ಟ್ರ. ಈಶಾನ್ಯದಲ್ಲಿಯೇ ಅನೇಕ ಬುಡಕಟ್ಟುಗಳು, ಅನೇಕ ಭಾಷೆಗಳು, ಅನೇಕ ಸಂಸ್ಕೃತಿ, ಆಚಾರ ವಿಚಾರಗಳು ಅಡಗಿವೆ. ಅವರೆಲ್ಲರೂ ಒಬ್ಬರನ್ನು ಒಬ್ಬರು ಗೌರವಿಸಿಕೊಂಡು ಸೌಹಾರ್ದವಾಗಿ ಜೀವನ ನಡೆಸುತ್ತಿದ್ದಾರೆ. ಭಾರತದ ಶ್ರೇಷ್ಠತೆ ಅಡಗಿವುದೇ ಇಲ್ಲಿ ಎಂದರು.