ಬೆಂಗಳೂರಿನಲ್ಲಿ 40ರಿಂದ 50 ಸಾವಿರ ಜನರಿಗೆ ಉದ್ಯೋಗ ಕೊಡುವ ಮೊಬೈಲ್ ತಯಾರಿಕಾ ಘಟಕ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ಮೊಬೈಲ್ ಘಟಕಕ್ಕೆ ಭೇಟಿ ನೀಡುವೆ ಎಂದರು.
ನಮಸ್ಕಾರ ಹೇಗಿದ್ದೀರಿ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಅವರು, ಉದ್ಯೋಗಾಧಾರಿತ ಕೈಗಾರಿಕೆಗಳಿಗೆ ಒತ್ತು ಕೊಡುವ ಪ್ರಮುಖ ಪ್ರಕಟಣೆಯೂ ಈ ಬಾರಿ ಬಜೆಟ್ನಲ್ಲಿ ಹೊರಬಿದ್ದಿದೆ ಎಂದರು. ಆಟಿಕೆ, ಆಹಾರ ಸಂಸ್ಕರಣೆ, ಚಪ್ಪಲಿ ಉತ್ಪಾದನೆ ಮೊದಲಾದವುಗಳಿಗೆ ಈ ಬಜೆಟ್ ಬೆಂಬಲ- ಆದ್ಯತೆ ಕೊಡಲಿದೆ ಎಂದು ವಿವರಿಸಿದರು.
ತಂತ್ರಜ್ಞಾನಕ್ಕೆ ಗರಿಷ್ಠ ಫೋಕಸ್ ಇರುವ ಬಜೆಟ್ ಇದು. ಡೀಪ್ಟೆಕ್ ಸ್ಟಾರ್ಟಪ್ಗಳಿಗೆ ನಿಧಿ ನೀಡುವ ಘೋಷಣೆಯಿಂದ ಬೆಂಗಳೂರು ಹೆಚ್ಚಿನ ಪ್ರಯೋಜನ ಪಡೆಯಲಿದೆ ಎಂದರು. ‘ನಮಸ್ಕಾರ ಹೇಗೆ ಇದ್ದೀರಿ’ ಎಂದು ಕನ್ನಡದಲ್ಲೇ ಮಾತನಾಡಿದ ಅವರು ಪತ್ರಿಕಾಗೋಷ್ಠಿ ಆರಂಭಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಬೆಂಗಳೂರು ಉತ್ತರ ಸಂಸದರು ಮತ್ತು ಕೇಂದ್ರದ ಸಚಿವರಾದ ಕು. ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್ ಮತ್ತು ಬೆಂಗಳೂರು ದಕ್ಷಿಣ ಸಂಸದ ಹಾಗೂ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.