ಬೆಂಗಳೂರಿನಲ್ಲಿ ಬೇಸಿಗೆ ನೀರಿನ ಸಮಸ್ಯೆ ಮತ್ತು ಟ್ಯಾಂಕರ್ ಮಾಫಿಯಾ ತಡೆಯಲು ಜಲಮಂಡಳಿ ಮೊಬೈಲ್ ಆ್ಯಪ್ ಆರಂಭಿಸುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ ಡಿಕೆ ಶಿವಕುಮಾರ್ ಈ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕರು ಈ ಆ್ಯಪ್ ಮೂಲಕ ಕಾವೇರಿ ನೀರಿನ ಟ್ಯಾಂಕರ್‌ಗಳನ್ನು ಬುಕ್ ಮಾಡಬಹುದು.
ಜಿಪಿಎಸ್ ಟ್ರ್ಯಾಕಿಂಗ್ ಮತ್ತು ಒಟಿಪಿ ಪರಿಶೀಲನೆಯ ಮೂಲಕ ಪಾರದರ್ಶಕತೆ ಹೆಚ್ಚಿಸಲಾಗುತ್ತದೆ. ಆ್ಯಪ್ ಮೂಲಕ ನೀರಿನ ಟ್ಯಾಂಕರ್‌ಗಳನ್ನು ಬುಕ್ ಮಾಡಿ ನಿಗದಿತ ಸಮಯದೊಳಗೆ ನೀರು ಪಡೆಯಲು ಪೂರ್ವನಿರ್ಧರಿತ ಶುಲ್ಕವನ್ನು ಪಾವತಿಸಲು ಅವಕಾಶವಿರುತ್ತದೆ. ಈ ಟ್ಯಾಂಕರ್‌ಗಳು ಬೋರ್‌ವೆಲ್ ನೀರನ್ನು ಪೂರೈಸುವುದಿಲ್ಲ. ಪೈಪ್ ನೀರು ಸರಬರಾಜು ಲಭ್ಯವಿಲ್ಲದ ಪ್ರದೇಶಗಳಲ್ಲಿ ಸ್ಥಾಪಿಸಲಾದ 100-ಕ್ಕೂ ಹೆಚ್ಚು ಕಾವೇರಿ ನೀರಿನ ಸಂಪರ್ಕ ಕೇಂದ್ರಗಳಿಂದ ಕಾವೇರಿ ನೀರನ್ನು ಪೂರೈಸಲಿವೆ.
ಈ ಯೋಜನೆಗಾಗಿ 200 ಟ್ಯಾಂಕರ್‌ಗಳನ್ನು ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. 6,000 ಮತ್ತು 12,000 ಲೀಟರ್ ಸಾಮರ್ಥ್ಯದ ಈ ಟ್ಯಾಂಕರ್‌ಗಳು ದಿನಕ್ಕೆ ಸರಾಸರಿ ಎಂಟು ಟ್ರಿಪ್‌ಗಳಷ್ಟು ಕಾರ್ಯನಿರ್ವಹಿಸಬಹುದು. ನೀರು ಮತ್ತು ಟ್ಯಾಂಕರ್ ವೆಚ್ಚವನ್ನು ಮೊದಲೇ ಲೆಕ್ಕಹಾಕಿ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ.
ಆ್ಯಪ್ ಆಧಾರಿತ ವ್ಯವಸ್ಥೆಯಲ್ಲಿ ಎಲ್ಲವನ್ನೂ ಸಾಫ್ಟ್‌ವೇರ್‌ನಲ್ಲಿ ಸಂಯೋಜಿಸಲಾಗಿದ್ದು, ಬುಕಿಂಗ್ ಮತ್ತು ಪಾವತಿಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ. ಟ್ಯಾಂಕರ್‌ನಲ್ಲಿ ಆಟೋಮ್ಯಾಟಿಕ್ ಎನೇಬಲ್ಡ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ವ್ಯವಸ್ಥೆ ಇದ್ದು, ಎಷ್ಟು ಲೀಟರ್ ನೀರು ತುಂಬಿದೆ. ಎಂಬುದನ್ನು ಅದಾಗಿಯೇ ಲೆಕ್ಕಾಚಾರ ಮಾಡುತ್ತದೆ. ಮನಬಂದಂತೆ ಹಣ ವಸೂಲಿ ಮಾಡುವ ಟ್ಯಾಂಕರ್ ಮಾಫಿಯಾ ಸಮಸ್ಯೆಗೆ ಕಡಿವಾಣ ಬೀಳಲಿದೆ. ಪ್ರತಿ ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಸಲಾಗುತ್ತದೆ. ಗ್ರಾಹಕರು ಅದನ್ನು ಟ್ರ್ಯಾಕ್ ಮಾಡಬಹುದು. ಬುಕಿಂಗ್ ಸಮಯದಲ್ಲಿ ಗ್ರಾಹಕರ ವಿತರಣಾ ವಿಳಾಸದ ಜಿಪಿಎಸ್ ನಿರ್ದೇಶಾಂಕಗಳನ್ನು ಪಡೆಯಲಾಗುತ್ತದೆ. ಗ್ರಾಹಕರಿಗೆ ಒಟಿಪಿ ಕಳುಹಿಸಲಾಗುತ್ತದೆ ಮತ್ತು ಅವರು ಅದನ್ನು ಟ್ಯಾಂಕರ್ ಸಿಬ್ಬಂದಿಯೊಂದಿಗೆ ಹಂಚಿಕೊಂಡ ನಂತರವೇ ಅವರಿಗೆ ನೀರು ಸರಬರಾಜು ಮಾಡಲಾಗುತ್ತದೆ.