ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿ 24 ಮಂದಿ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಸಚಿವ ಸಂಪುಟ ಪುನಾರಚನೆ ಮತ್ತು ಮೊದಲ ಬಾರಿ ಶಾಸಕರಾಗಿರುವ ಕನಿಷ್ಠ ಐವರಿಗಾದರೂ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ 31 ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಪರಿಷತ್ ಸದಸ್ಯರು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದ್ದಾರೆ. ಸಂಪುಟದಲ್ಲಿ ಎಂಎಲ್ಸಿಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ ಮತ್ತು ಎಂಎಲ್ಸಿಗಳಿಗೆ ರಾಜಕೀಯ ನಿರೀಕ್ಷೆ ಗಳಿಲ್ಲ ಎಂಬ ಟೀಕೆಗೆ ಕಾರಣವಾಗುತ್ತದೆ. ಸಮರ್ಥ ನಾಯಕರು ಎಂಎಲ್ಸಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್ ಪಡೆಯಲು ಮುಂದಾಗುವುದರಿಂದ ಗುಂಪುಗಾರಿಕೆಗೆ ಕಾರಣವಾಗುತ್ತದೆ ಮತ್ತು ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ವಿಧಾನ ಪರಿಷತ್ತಿನ ಕನಿಷ್ಠ 5 ಸದಸ್ಯರನ್ನ ಸಚಿವ ಸಂಪುಟದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರಗಳಿಂದ ಒಬ್ಬರು, ಕೆಳಮನೆ ಅಥವಾ ನಾಮನಿರ್ದೇಶಿತ ವರ್ಗದಿಂದ ಒಬ್ಬ ಎಂಎಲ್ಸಿಯನ್ನು ಆಯ್ಕೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.


