ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಸೇರಿದಂತೆ ವಿಧಾನ ಪರಿಷತ್‌ಗೆ ನಾಮಕರಣ ಸದಸ್ಯರಾಗಿ ಶಿಫಾರಸ್ಸಾಗಿದ್ದ ನಾಲ್ಕು ಹೆಸರುಗಳಿಗೆ ಕಾಂಗ್ರೆಸ್ ಹೈಕಮಾಂಡ್ ತಾತ್ಕಾಲಿಕ ತಡೆ ವಿಧಿಸಿದೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ದಲಿತ ಮುಖಂಡ ಡಿ.ಜಿ. ಸಾಗರ್, ರಾಜ್ಯ ಸರಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರನ್ನು ನಾಮನಿರ್ದೇಶನ ಮಾಡಲು ಹೈಕಮಾಂಡ್ ಶಿಫಾರಸು ಮಾಡಿತ್ತು.
ರಾಜ್ಯಪಾಲರಿಗೆ ಕಳುಹಿಸಲು ನಾಲ್ವರ ಹೆಸರಿದ್ದ ಶಿಫಾರಸು ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸಹಿ ಹಾಕಿದ್ದರು. ಈಗ ಹೈಕಮಾಂಡ್ ದಿಢೀರ್ ಆಗಿ ರಾಜ್ಯಪಾಲರಿಗೆ ಕಳುಹಿಸದಂತೆ ಸಿಎಂ ಸಿದ್ದರಾಮಯ್ಯನವರಿಗೆ ಸೂಚಿಸಿದೆ. ರಾಜ್ಯದ ಕಾಂಗ್ರೆಸ್ ನಾಯಕರ ಒತ್ತಡದ ಹಿನ್ನಲೆಯಲ್ಲಿ ಕಡೆಗಳಿಗೆಯಲ್ಲಿ ಎಐಸಿಸಿಯೇ ತಡೆ ಹಿಡಿಯುವಂತೆ ಸೂಚಿಸಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮೂಲಕ ಸಂಭಾವ್ಯರ ಪಟ್ಟಿ ಪಡೆದುಕೊಂಡಿದ್ದ ಎಐಸಿಸಿ ವರಿಷ್ಠ ನಾಯಕರು ಈ ನಾಲ್ವರ ಹೆಸರನ್ನು ಅಂತಿಮಗೊಳಿಸಿದ್ದರು.
ರಮೇಶ್ ಬಾಬು ಮತ್ತು ದಿನೇಶ್ ಅಮೀನ್‌ಮಟ್ಟು ಹಿಂದುಳಿದ ವರ್ಗಕ್ಕೆ ಸೇರಿದವರು, ಡಿ.ಜಿ. ಸಾಗರ್ ಪರಿಶಿಷ್ಟ ಜಾತಿ, ಆರತಿ ಕೃಷ್ಣ ಒಕ್ಕಲಿಗ ಸಮಾಜದವರು.