ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಮತ್ತು ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಂಡ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಉಚ್ಚಾಟನೆಯ ಕ್ರಮ ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಘಟಕ ಕೋರಿತ್ತು. ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಿದೆ ಎಂದು ವಿವರಿಸಿದರು.
ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ಏನು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಅವರಿಬ್ಬರಿಗೂ ಹಾಗೂ ಕೇಂದ್ರ ನಾಯಕತ್ವಕ್ಕೆ ಗೊತ್ತಿದೆ. ಇದರ ಕುರಿತು ಡಿ.ಕೆ.ಶಿವಕುಮಾರ್ ಅವರು ಇಷ್ಟೊಂದು ನೋವು ಅಥವಾ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ; ಇದು ಪಕ್ಷದ ತೀರ್ಮಾನ ಎಂದು ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ಸರಕಾರ ಬಂದ ನಂತರ ಅವರಿಬ್ಬರಿಗೂ ಉತ್ತಮ ಅವಕಾಶ ಲಭಿಸಿತ್ತು. ಆದರೆ, ಸರಕಾರ ಇಲ್ಲದಾದಾಗ, ವಿಪಕ್ಷದಲ್ಲಿದ್ದಾಗ ಅವರಿಗೆ ಸ್ವಲ್ಪ ಸಮಸ್ಯೆ ಆಗಿದೆ ಎಂದು ಕಾಣುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅವರಿಬ್ಬರ ಕುರಿತು ರಾಜ್ಯ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆ ಆಗಿತ್ತು. ಅವರಿಗೆ ನೋಟಿಸ್ ಕೊಡಲಾಗಿತ್ತು. ಅವರು ಕೊಟ್ಟ ಉತ್ತರದ ಕುರಿತು ಮಾಹಿತಿ ಇಲ್ಲ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.