ಬಾಗೇಪಲ್ಲಿ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ಸುಬ್ಬಾರೆಡ್ಡಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆಗ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಮಾಹಿತಿ ಮುಚ್ಚಿಟ್ಟ ಆರೋಪದ ಹಿನ್ನೆಲೆ ಅವರ ಆಯ್ಕೆ ರದ್ದುಗೊಂಡಿತ್ತು.
ಪರಾಜಿತ ಅಭ್ಯರ್ಥಿ ಮುನಿರಾಜುಗೆ ಆಕ್ಷೇಪಣೆ ಸಲ್ಲಿಸಲು ಸುಪ್ರೀಂಕೋರ್ಟ್ ಆರು ವಾರ ನೀಡಿದ್ದು, ಸೆಪ್ಟೆಂಬರ್‌ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ಆಸ್ತಿ ಮಾಹಿತಿ ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಮುನಿರಾಜು ಕೋರ್ಟ್‌ಗೆ ಮನವಿ ಮಾಡಿದ್ದರು. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದ ಸುಬ್ಬಾರೆಡ್ಡಿ, ಚುನಾವಣಾ ತಕರಾರು ಅರ್ಜಿಯಲ್ಲಿ ಹುರುಳಿಲ್ಲ. ಅದನ್ನು ವಜಾ ಮಾಡಬೇಕೆಂದು ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ್ದ ಹೈಕೋರ್ಟ್ ಸುಬ್ಬಾರೆಡ್ಡಿ ಅರ್ಜಿಯನ್ನು ವಜಾ ಮಾಡಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶಿಸಿತ್ತು. ಎದುರಾಳಿ ಅಭ್ಯರ್ಥಿಯಾಗಿದ್ದ ಸಿ.ಮುನಿರಾಜು ವಿಜಯಿ ಎಂದು ಕೋರ್ಟ್ ಘೋಷಿಸಿರಲಿಲ್ಲ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಆರು ತಿಂಗಳೊಳಗಾಗಿ ತಡೆಯಾಜ್ಞೆ ನೀಡದಿದ್ದರೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸುವುದು ಅನಿವಾರ್ಯವಾಗಿತ್ತು. ಸುಬ್ಬಾರೆಡ್ಡಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.


