ಬೆಂಗಳೂರು: ರಾಜ್ಯದ ಸಂಪತ್ತು ಲೂಟಿ ಮಾಡಿ 7 ವರ್ಷ ಜೈಲಲ್ಲಿ ಇದ್ದ ವ್ಯಕ್ತಿ ನನ್ನ ವಿರುದ್ಧ ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸಂಸದ ಸಸಿಕಾಂತ್ ಸೆಂಥಿಲ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಧರ್ಮಸ್ಥಳ ಪ್ರಕರಣದ ಹಿಂದೆ ನನ್ನ ಕೈವಾಡವಿದೆ ಎಂಬ ಹೇಳಿಕೆ ನೀಡಿದ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಧರ್ಮಸ್ಥಳ ಪ್ರಕರಣದ ಹಿಂದೆ ನಾನು ಇದ್ದೇನೆ ಎಂದು ಮೊದಲ ಬಾರಿ ಆರೋಪ ಮಾಡಿದಾಗ ಚೈಲ್ಡಿಷ್ ಹೇಳಿಕೆ ಎಂದು ಸುಮ್ಮನಿದ್ದೆ. ಆದರೆ ಇದು ದೊಡ್ಡ ರೂಪ ಪಡೆಯುತ್ತಿದ್ದು, ದಿನಕ್ಕೊಬ್ಬರು ಹೇಳಿಕೆ ನೀಡಲು ಆರಂಭಿಸಿದ್ದಾರೆ. ಆದ್ದರಿಂದ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ ಎಂದು ಅವರು ಹೇಳಿದರು.
ಜನಾರ್ದನ ರೆಡ್ಡಿ ನನ್ನ ವಿರುದ್ಧ ಬುರುಡೆ ಕತೆ ಕಟ್ಟಿದ್ದಾರೆ. ಆದರೆ ಬುರುಡೆ ಎಲ್ಲಿ ಸಿಗುತ್ತದೆ ಎಂಬುದೇ ಗೊತ್ತಿಲ್ಲ. ಆದರೆ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸುತ್ತಿರುವ ಜನಾರ್ದನ ರೆಡ್ಡಿ ಮತ್ತು ಅಣ್ಣಾಮಲೈ ಅವರಿಗೆ ಸಿಗಬಹುದು ಎಂದು ಸೆಂಥಿಲ್ ತಿರುಗೇಟು ನೀಡಿದರು.
ಜನಾರ್ದನ ರೆಡ್ಡಿ ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿ 7 ವರ್ಷ ಜೈಲಲ್ಲಿ ಇದ್ದವರು. ದೇಶದ ಮಾನ ಹರಾಜು ಹಾಕಿದ ವ್ಯಕ್ತಿ. ಈ ವ್ಯಕ್ತಿ ನನ್ನ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ಸುಮ್ಮನಿದ್ದೆ. ಆದರೆ ಇದೇ ಹೇಳಿಕೆಯನ್ನೇ ಎಲ್ಲಾ ನಾಯಕರು ಹೇಳಲು ಶುರು ಮಾಡಿದ್ದಾರೆ. ಆದ್ದರಿಂದ ಸುಮ್ಮನೆ ಇರಬಾರದು ಎಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದೆನೆ ಎಂದರು.


