ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿ ಪುಂಡರ ಹಾವಳಿ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಂದ್‌ಗೆ ಕಾರಣವಾದ ಪ್ರಮುಖ ಕೇಂದ್ರ ಬೆಳಗಾವಿಯಲ್ಲೇ ಜನಜೀವನ ಸಹಜ ಸ್ಥಿತಿಯಲ್ಲಿ ಸಾಗುತ್ತಿದೆ. ಬೆಂಗಳೂರು ನಗರದ ಪ್ರಮುಖ ಪ್ರದೇಶಗಳಲ್ಲಿ ಬಸ್, ಆಟೋ ಓಡಾಟ ಎಂದಿನಂತೆಯೇ ಇದೆ. ಶನಿವಾರ ಆಗಿರುವುದರಿಂದ ಸಂಚಾರ ದಟ್ಟಣೆ ತುಸು ಕಡಿಮೆ ಇದೆ.
ಬೆಂಗಳೂರಿನ ಹೆಬ್ಬಾಳ ದಿಂದ ಕೆಆರ್ ಪುರಂ ಭಾಗದ ಕಡೆ ಸಂಚರಿಸುವರರಿಗೆ ಹಾಗೂ ಇತರ ಪ್ರಮುಖ ಪ್ರದೇಶಗಳವರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಂದಿನಂತೆಯೇ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್, ಆಟೋ, ಓಲಾ, ಉಬರ್ ಸಂಚಾರ ನಡೆಸುತ್ತಿವೆ.
‘ನಾವು ಒಂದು ದಿನ ಆಟೋ ನಿಲ್ಲಿಸಿದರೆ ನಮ್ಮ ಕುಟುಂಬ ನೆಡೆಯುವುದು ಹೇಗೆ? ನಮ್ಮ ಆಟೋ ಯೂನಿಯನ್ಗಳಲ್ಲಿ ಒಗ್ಗಟ್ಟು ಇಲ್ಲ. ನಾವು ಇನ್ನೇನು ಬಂದ್ ಮಾಡುವುದು, ನಮ್ಮ ಹೊಟ್ಟೆ ಪಾಡಿಗಾಗಿ ಆಟೋ ಓಡಿಸ್ತಿದ್ದೇವೆ. ಮೊದಲು ರ್ಯಾಪಿಡೋ ನಿಲ್ಲಿಸಲಿ’ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಿಗಿ ಭದ್ರತೆ ಪ್ರತಿಭಟನಾಕಾರರು ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವ ಕಾರಣ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. 1 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುವ ಸಾಧ್ಯತೆ ಇದ್ದು, ಭದ್ರತೆಗೆ 100 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಓರ್ವ ಎಸಿಪಿ, ಇಬ್ಬರು ಇನ್ಸ್ಪೆಕ್ಟರ್, 6 ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.
ಬೆಳಗಾವಿಯಲ್ಲಿ ತಟ್ಟದ ಬಂದ್ ಬಿಸಿ ಬೆಳಗಾವಿ ನಗರದಲ್ಲಿ ಬಂದ್ ಬಿಸಿ ಕಾಣಿಸಿಲ್ಲ. ನಗರದಲ್ಲಿ ಶನಿವಾರ ಬೆಳಗ್ಗೆ ಎಂದಿನಂತೆಯೇ ಬಸ್ ಸಂಚಾರ ಆರಂಭವಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿವೆ. ಈ ಮಧ್ಯೆ, ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲು ಕರವೇ ನಿರ್ಧರಿಸಿದೆ.
ದಾವಣಗೆರೆಯಲ್ಲೂ ಬಂದ್‌ಗೆ ನೀರಸ ಪ್ರತಿಕ್ರಿಯೆ ದಾವಣಗೆರೆಯಲ್ಲಿ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್, ಆಟೋಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಅಹಿತಕರ ಘಟನೆ ನಡೆಯದಂತೆ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಕೋಟೆ ನಾಡು ಚಿತ್ರದುರ್ಗದಲ್ಲಿಯೂ ಜನಜೀವನ ಎಂದಿನಂತೆಯೇ ಆರಂಭವಾಗಿದೆ. ಹೂವು, ಹಣ್ಣು, ಬೇಕರಿ, ಗೂಡಂಗಡಿ ವ್ಯಾಪಾರ ವಹಿವಾಟು ಆಟೋ, ಬಸ್ ಸಂಚಾರ ಮಾಮೂಲಿಯಾಗಿದೆ. ಮಂಡ್ಯದಲ್ಲಿ ಪ್ರತಿಭಟನೆಯ ಕಾವು ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ರಸ್ತೆಯಲ್ಲಿಯೇ ಮಲಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಶಿವರಾಮೇಗೌಡ ಬಣದಿಂದ ಈ ಪ್ರತಿಭಟನೆ ನಡೆದಿದೆ.
ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ಮೈಸೂರು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಹೋಟೆಲ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಜಿಲ್ಲಾ ವಕೀಲರ ಸಂಘ ಸೇರಿ ಹಲವರಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಂಚಾರ ಎಂದಿನಂತೆಯೇ ಇರಲಿದೆ. ಹೋಟೆಲ್‌ಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಾಗುತ್ತಿದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಕನ್ನಡ ಪರ ಸಂಘಟನೆಗಳು ಬೆಳ್ಳಂಬೆಳಗ್ಗೆಯೇ ಪ್ರತಿಭಟನೆ ನಡೆಸಿವೆ.