Menu

ಪುರುಷ ವ್ಯವಸ್ಥೆಯಲ್ಲಿ ಮಿಸ್ಸಿಂಗ್ ವುಮೆನ್

ನಮ್ಮ ಕನ್ನಡ ಸಾಹಿತ್ಯದಲ್ಲಿ ವೈದ್ಯ ಸಾಹಿತ್ಯ ಮರೆಯಾಗುತ್ತಿರುವ ಸಂದರ್ಭದಲ್ಲಿ ಡಾ. ಕರವೀರ ಪ್ರಭು ಕ್ಯಾಲಕೊಂಡ ಅವರು ವೈದ್ಯ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ನೂರಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ನಾಡಿನಲ್ಲಿ ವೈದ್ಯ ಸಾಹಿತ್ಯ ಹುಲುಸಾಗಿ ಬೆಳೆಯಲು ಶ್ರಮಿಸುತ್ತಿದ್ದಾರೆ. ಈ ಕೃತಿಯ ಒಡಲಾಳದಲ್ಲಿ ಇರುವ ಲೇಖನಗಳಲ್ಲಿ  ಹೆಣ್ಣು ಭ್ರೂಣ ಹತ್ಯೆ ವಿಷಯದ ಬದುಕು ಬವಣೆಗಳನ್ನು ವೈದ್ಯಶಾಸ್ತ್ರದ ಹಾಗೂ ವೈದ್ಯ ಸಾಹಿತ್ಯದ ಮೂಲಕ ವೈಚಾರಿಕವಾಗಿ ಸೆರೆಹಿಡಿದಿರುವುದನ್ನು ಕಾಣಬಹುದು. ಹೆಣ್ಣು ಭ್ರೂಣ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಶೋಧ, ಅಂತರ್ಶೋಧ, ಸಂಶೋಧ, ಬಹುಶೋಧ, ವೈಚಾರಿಕಶೋಧದ ಮಾನದಂಡಗಳನ್ನು ಬಳಸಿ ಈ ಕೃತಿ ರಚಿಸಿದ್ದಾರೆ. 

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನ. ವಿದ್ಯಾದೇವತೆ ಸರಸ್ವತಿ, ಧನ-ಕನಕ ಕೊಡುವವಳು ಲಕ್ಷ್ಮಿ, ದುಷ್ಟರ ಸಂಹಾರ ಮಾಡಿ ಶಿಷ್ಟರ ರಕ್ಷಣೆ    ಮಾಡುವವಳು ದೇವಿ ಎನ್ನುವ ನಾವು ಸ್ತ್ರೀಯರನ್ನು ಸರ್ವಶ್ರೇಷ್ಠ ಶಕ್ತಿಯನ್ನಾಗಿಸಿ,  ಮಾತೃದೇವೋಭವ ಎಂದು ಹಾಡಿ ಹರಸಿದ್ದೇವೆ. ಧರ್ಮಶಾಸ್ತ್ರದಲ್ಲಿ ತಂದೆಗಿಂತ ತಾಯಿ ಹೆಚ್ಚು ಪೂಜ್ಯಳೆಂದು ಹೇಳಿದೆ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ನಾಣ್ನುಡಿ ಮೂಡಿ ಬಂದಿದೆ. ಇಷ್ಟೆ ಸ್ತ್ರೀಯರ ಬಗ್ಗೆ ಮಾತನಾಡುತ್ತಿರುವ ಸಮೂಹ ಇಂದಿನ ಪರಿಸ್ಥಿತಿಯಲ್ಲಿ ಭ್ರೂಣ ಪರೀಕ್ಷೆ ಮಾಡಿ ಹೆಣ್ಣು ಭ್ರೂಣ ನಾಶ ಮಾಡುತ್ತಿರುವ ಪರಿಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಹೆಣ್ಣು ಭ್ರೂಣ ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಸ್ತ್ರೀಯರ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ವೈಚಾರಿಕವಾಗಿ ಆಲೋಚನೆ ಮಾಡುತ್ತಿರುವ  ವೈದ್ಯ ಸಾಹಿತಿ ಹಾಗೂ ಸಾಮಾಜಿಕ ಚಿಂತಕರೂ ಆಗಿರುವ ಡಾ,ಕರವೀರ ಪ್ರಭು ಕ್ಯಾಲಕೊಂಡ ಅವರು ಬರೆದಿರುವ ಮಿಸ್ಸಿಂಗ್ ವುಮೆನ್ ಎಂಬ ವಿಶೇಷ ಶೀರ್ಷಿಕೆಯುಳ್ಳ ಕೃತಿಯಲ್ಲಿ ಹೇಳಿರುವ ಮಾತುಗಳು ಎಂಥವರನ್ನೂ ಯೋಚನೆಗೀಡು ಮಾಡುತ್ತವೆ.

ಈ ಕೃತಿಯಲ್ಲಿ ಅವರು ವೈದ್ಯಕೀಯ ವಿಷಯವನ್ನು ಚಿಂತನೆಯ ಮೂಸೆಯಲ್ಲಿ ಪದರ ಪದರವಾಗಿ ಬಿಡಿಸಿದರೆ. ಇಲ್ಲಿನ ಲೇಖನಗಳು ಓದುಗರ ಹೃದಯವನ್ನು ಸಲೀಸಾಗಿ ಸೇರಿ ಬುದ್ಧಿಯನ್ನು ಅರಳಿಸುತ್ತವೆ. ಎಲ್ಲಿಯೂ ಮೂಢನಂಬಿಕೆಗಳನ್ನಾಗಲಿ, ಕಲ್ಪನೆಗಳನ್ನಾಗಲಿ ಈ ಕೃತಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಕೆಲವು ಪ್ರಚಲಿತದಲ್ಲಿರುವ ಅಂಧಶ್ರದ್ಧೆಗಳನ್ನು ಖಾರವಾಗಿ ಟೀಕಿಸಿ ಓದುಗರ ಕಣ್ಣು ತೆರೆಸಿದ್ದಾರೆ. ಕಂಡದ್ದನ್ನು, ಕೇಳಿದ್ದನ್ನು, ನೋಡಿದ್ದನ್ನು, ಅನಿಸಿದ್ದನ್ನು ತಮ್ಮ ಆಪ್ತ ಭಾಷೆಯಲ್ಲಿ ಮನವರಿಕೆಯಾಗುವಂತೆ ಹೇಳುವ ಉತ್ಕೃಷ್ಟ ಭಾಷೆಯನ್ನು ಈ ಕೃತಿಯಲ್ಲಿ ಬಳಸಿರುವುದು ತುಂಬಾ ಶೋಭಾಯಮಾನ. ಇಲ್ಲಿ ವಿಚಾರಗಳು ಮಾತ್ರ ಮನವರಿಕೆಯಾಗುತ್ತವೆಯೇ ಹೊರತು ವಾದ ವಿವಾದಗಳ ಗೊಂದಲವಿಲ್ಲ. ಅವರು ಕಂಡುಂಡ ಪ್ರಸಂಗಗಳು ಮತ್ತು ಎದುರಾದ ಸಮಸ್ಯೆಗಳು ಹಾಗೂ ಮುಂದೆ ತೋರಬಹುದಾದ ಅಂಶಗಳ ಕುರಿತು ಕ್ರಮವಾಗಿ ಟಿಪ್ಪಣಿ ಮಾಡಿ ಕೃತಿರೂಪದಲ್ಲಿ  ಪ್ರಕಟಪಡಿಸಿರುವುದು ಸಂತೋಷದಾಯಕವಾದ ವಿಚಾರ. ಪ್ರಸ್ತುತ ಹೆಣ್ಣು ಭ್ರೂಣ ಹತ್ಯೆ ಎಂಬ ಜ್ವಲಂತ ಸಮಸ್ಯೆಯ ಬಗ್ಗೆ ಎಳೆಎಳೆಯಾಗಿ ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ವಿಚಾರಗಳನ್ನು ಈ ಕೃತಿಯಲ್ಲಿ ಸಾರವತ್ತಾಗಿ ಚಿತ್ರಿಸಿದ್ದಾರೆ.

ಸ್ತ್ರೀ ಪ್ರಧಾನ ಕೇಂದ್ರೀಕೃತವಾದ ಈ ಕೃತಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂವು, ಸ್ತ್ರೀ ಸ್ಥಾನಮಾನ, ಶರಣರ ದೃಷ್ಟಿಯಲ್ಲಿ ಮಹಿಳೆ, ಗಾಂಧೀಜಿ ಕಂಡಂತೆ ಮಹಿಳೆ, ವಿಶ್ವದ ವಿಸ್ಮಯ ಸೃಷ್ಟಿ, ಸ್ಕಾ ನಿಂಗ್ ಸೆಂಟರ್ ಹೆಣ್ಣಿನ ಹಂಟರ್, ಗಂಡು ಹೆಣ್ಣು ಆರಂಭದ ಭಿನ್ನ ಹೇಗೆ, ಅಂತ್ಯ ಕಾಣದ ಲಿಂಗ ತಾರತಮ್ಯ, ಇತಿಹಾಸದ ಕರಾಳ ಕೃತ್ಯಗಳ ದಾರಿಯಲ್ಲಿ, ಗರ್ಭಪಾತ ತಂದ ದುರಂತ, ಮಿಸ್ಸಿಂಗ್ ವುಮೆನ್, ನಾರಿಯ ಹೋರಾಟ ನಡೆದು ಬಂದ ದಾರಿ, ಅರ್ಥರಹಿತ ಮಿಥ್ಯಗಳು, ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಶಿಶುಶಾಸನ, ಕಾನೂನಿಗೆ ಕರುಣೆಯ ಕಣ್ಣು ಬೇಡವೇ, ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ, ಇನ್ನಾದರೂ ನಿಂತಿದೆ ಹೆಣ್ಣು ಭ್ರೂಣ ಹತ್ಯೆ, ಬೇಕು ಬದಲಾವಣೆ, ಪಿಪ್ಲಾಂತ್ರಿ ಕಲಿಸಿದ ಪಾಠ, ಅಂತಿಮ ಪರಿಹಾರ ಜನಜಾಗೃತಿ, ಪುರುಷೋತ್ತಮನಾಗುವ ಮೊದಲು, ದಿಕ್ಸೂಚಿಯಾಗಲಿದೆಯೇ ೨೦೧೧ರ ಜನಗಣತಿ ಮುಂತಾದ ವಾಸ್ತವಿಕ ಮತ್ತು ಪ್ರಚಲಿತ ವಿಚಾರಗಳನ್ನು ಈ ಕೃತಿಯಲ್ಲಿ ಲೇಖಕರು ಚರ್ಚಿಸಿದ್ದಾರೆ.

ಹೆಣ್ಣನ್ನು ಮಾತೃ ಮೂರ್ತಿಯಾಗಿ ಸ್ವೀಕರಿಸುವ, ಲಕ್ಷ್ಮಿ ಸರಸ್ವತಿ ಶಕ್ತಿ ಎಂದು ಪೂಜಿಸುವ ಮತ್ತು ಸಂಭ್ರಮಿಸುವ ನಮ್ಮ ದೇಶದಲ್ಲಿ ಪ್ರತಿವರ್ಷ ನಾಲ್ಕು ಕೋಟಿ ಇಪ್ಪತ್ತು ಲಕ್ಷ  ಹೆಣ್ಣು ಭ್ರೂಣಗಳು ಗರ್ಭದ ಕಣ್ಮರೆಯಾಗುತ್ತಿವೆ ಎಂಬ ಆಘಾತಕಾರಿ ವಿಚಾರವನ್ನು ಲೇಖಕರು ಈ ಕೃತಿಯಲ್ಲಿ ಪ್ರತಿಬಿಂಬಿಸಿರುವುದು ಯೋಚನೆ ಮಾಡುವ ಸನ್ನಿವೇಶ ಸೃಷ್ಟಿಸುತ್ತದೆ ಎಂದು ಹೇಳಬಹುದು. ಹೀಗೆ ಪ್ರತಿವರ್ಷ ಕೋಟ್ಯಾಂತರ ಹೆಣ್ಣು ಭ್ರೂಣ ಹತ್ಯೆಯಾಗುತ್ತಿರುವುದು ಕಂಡು ಬರುತ್ತಿರುವುದರಿಂದ ಇದನ್ನು ಹಗುರವಾಗಿ ಪರಿಗಣಿಸುವ ಸಂಗತಿಯಲ್ಲ. ಇದು ಸಮಾಜಕ್ಕೂ ಮತ್ತು ಹೆಣ್ಣಿಗೂ ನಡುವೆ ಉಂಟಾಗಿರುವ ದೊಡ್ಡ ಅಲರ್ಜಿ ಎಂಬ ಮಾತನ್ನು ಲೇಖಕರು ಈ ಕೃತಿಯಲ್ಲಿ ತಿಳಿಸಿzರೆ. ಕರ್ನಾಟಕದಲ್ಲಿ ಲಿಂಗಾನುಪಾತ ನೋಡಿದಾಗ ಒಂದು ಸಾವಿರ ಪುರುಷರಿಗೆ ೯೬೫ ಮಹಿಳೆಯರು ಇರುವುದು ಕಂಡು ಬರುತ್ತದೆ ಎಂಬ ಅಂಶ ಇಲ್ಲಿ ಕಂಡು ಬರುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ಇರುವ ಸಮಾಜದಲ್ಲಿ ಮಹಿಳೆಯರು ಎರಡು ಬಗೆಯಲ್ಲಿ ಶೋಷಣೆಗೆ ಒಳಗಾಗುತ್ತಿzರೆ. ಒಂದು ವರ್ಣ ಸಂಬಂಧಿ ನೆಲೆಯಲ್ಲಿ, ಇನ್ನೊಂದು ಲಿಂಗ ಸಂಬಂಧಿ ನೆಲೆಯಲ್ಲಿ. ಈ ಎರಡು ನೆಲೆಯಲ್ಲಿ ಅತಿ ಹೆಚ್ಚಿನ ತಾರತಮ್ಯವನ್ನು ಮಹಿಳೆಯರು ಎದುರಿಸುತ್ತಿzರೆ. ಇವತ್ತಿನ ಸಂದರ್ಭದಲ್ಲಿ ಅತಿ ಕಷ್ಟದ ದುಸ್ಥಿತಿಯ ಪರಿಸ್ಥಿತಿಯನ್ನು ಮಹಿಳೆಯರೇ ಹೆಚ್ಚಾಗಿ ಅನುಭವಿಸುತ್ತಿzರೆ. ಬಡತನ ಹಸಿವು ಹಿಂಸೆಗಳ ತೀವ್ರತೆಯೂ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ತಟ್ಟುತ್ತದೆ. ಲಿಂಗ ಸಂಬಂಧಿ ನೆಲೆಯಿಂದ ಅವರು ಬಗೆಬಗೆಯ ಅನ್ಯಾಯಕ್ಕೆ ಒಳಗಾಗುತ್ತಿzರೆ. ಮಹಿಳೆಯರು ಎಂಬ ಕಾರಣಕ್ಕೆ ಅವರು ದೌರ್ಜನ್ಯ ಹಿಂಸೆ ಅವಮಾನ ಅಪಮಾನ ದುಃಖಗಳನ್ನು ಎದುರಿಸಬೇಕಾಗಿದೆ.

ಮಹಿಳೆಯರನ್ನು ಸರಕನ್ನಾಗಿ, ಬಿಂಬಿಸುತ್ತಾ, ಮಾರಾಟ ಮಾಡುವ ವಸ್ತುವನ್ನಾಗಿ ನೋಡಲಾಗುತ್ತಿದೆ. ಹೆಣ್ಣು ಹೊನ್ನು ಮಣ್ಣು ಎಂಬ ನುಡಿಗಟ್ಟಿನ ಮೂಲದಲ್ಲಿರುವ ಇಂಗಿತಾರ್ಥವೂ ಇದೆ ಆಗಿದೆ ಎಂಬ ವಿಚಾರವನ್ನು ಲೇಖಕರು ಈ ಕೃತಿಯಲ್ಲಿ ಪ್ರತಿಬಿಂಬಿಸಿದ್ದಾರೆ.  ಮಹಿಳೆಯರ ಕಾಳಜಿಯ ಬಗ್ಗೆ ಮಹಿಳೆಯರ ರಕ್ಷಣೆಯ ಬಗ್ಗೆ ಸರ್ಕಾರ ಅನುಕೂಲವಾದ ವಾತಾವರಣ ಕಲ್ಪಿಸಬೇಕು ಎಂಬ ಕಾಳಜಿಯುಕ್ತ ಮಾತುಗಳನ್ನು ಈ ಕೃತಿಯಲ್ಲಿ ಹೇಳಿದ್ದಾರೆ. ಇಂದು ಲಿಂಗ ತಾರತಮ್ಯ ಪರಿಧಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ವರದಕ್ಷಿಣೆ ಸಂಬಂಧಿ ಸಾವುಗಳು, ರಕ್ತಹೀನತೆ, ಅಪೌಷ್ಟಿಕತೆ, ಅನಕ್ಷರತೆ, ಆತ್ಮಹತ್ಯೆ, ಮಾನಭಂಗ, ದೌರ್ಜನ್ಯ, ಅಪಮಾನ, ಅಪಕೃತಿ, ಅವಮಾನ, ಶೋಷಣೆ, ದೈಹಿಕ ಹಿಂಸೆಗಳ ರೂಪದಲ್ಲಿ ಹಾಗೂ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯವನ್ನು ಅವರು ಪುರುಷ ಸಮಾಜದಿಂದ ಅನುಭವಿಸುತ್ತಿದ್ದಾರೆ.  ತಮ್ಮ ಜೀವನದ ಮೇಲೆ ತೀವ್ರ ಪರಿಣಾಮ ಬೀರುವ ಸಂಗತಿಗಳ ಬಗ್ಗೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ತಮ್ಮ ಜೀವನದ ಮೇಲೆ ತೀವ್ರ ಪರಿಣಾಮ ಬೀರುವ ಸಂಗತಿಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯದಿಂದಲೂ ಅವರು ವಂಚಿತರಾಗಿದ್ರೆದಾರೆ ಎಂಬ ಸಾಮಾಜಿಕ ಕಳಕಳಿಯ ಮಾತುಗಳನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ.

ಜಗತ್ತಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಹೆಣ್ಣು ಮಕ್ಕಳ ಸಂಖ್ಯೆ ಇದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿರುವುದು ಕಳವಳಕಾರಿ ವಿದ್ಯಮಾನ. ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಜನಗಣತಿ ಇತಿಹಾಸದುದ್ದಕ್ಕೂ ಸ್ತ್ರೀ ಪುರುಷರ ಪ್ರಮಾಣ ಅವಲೋಕಿಸಿದಾಗ ಪ್ರತಿ ಸಾವಿರ ಪುರುಷರಿಗೆ ಅಷ್ಟೇ ಸಂಖ್ಯೆಯ ಸ್ತ್ರೀಯರ ಪ್ರಮಾಣದ ಕೊರತೆ ಇರುವುದನ್ನು ಕಾಣಬಹುದು. ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿzಗಿಯೂ ಕಾನೂನುಗಳು ರೂಪಿತವಾಗಿದ್ದರೂ, ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿರುವುದು ಆಶ್ಚರ್ಯ. ಮಹಿಳೆಯನ್ನು ನಮ್ಮ ಸಂಸ್ಕೃತಿಯಲ್ಲಿ ದೇವಿ ಎಂದು ಪೂಜಿಸುತ್ತಾ ಬಂದಿದ್ದರೂ, ಪುರುಷ ಪ್ರಧಾನ ಮೌಲ್ಯಗಳು ಹಾಸುಹೊಕ್ಕಾಗಿರುವ ನಮ್ಮ ಸಮಾಜದಲ್ಲಿ ಹೆಣ್ಣು ಹುಟ್ಟಿದರೆ ಮನೆಗೆ ಭಾರ. ಹೆಣ್ಣು ಎಷ್ಟಾದರೂ ಮತ್ತೊಬ್ಬರ ಸ್ವತ್ತು ಎಂಬ ಮನೋಭಾವ ನಮ್ಮಲ್ಲಿ ಬೆಳೆದಿರುವುದರಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಅಂಶವನ್ನು ಈ ಕೃತಿಯಲ್ಲಿ ಕಾಣಬಹುದು.

ನಮ್ಮ ಸಮಾಜದಲ್ಲಿ ಪುರುಷರ ಮತ್ತು ಮಹಿಳೆಯರ ಸಂಖ್ಯೆ ಸಮಸಮವಾಗಿರುತ್ತದೆ ಎಂಬುದು ಸಾಮಾನ್ಯ ಜನರ ತಿಳಿವಳಿಕೆ. ಆ ದೇವರು ಪ್ರತಿಯೊಂದು ಗಂಡಿಗೆ ಒಂದು ಹೆಣ್ಣು ಹಾಗೂ ಪ್ರತಿಯೊಂದು ಹೆಣ್ಣಿಗೆ ಒಂದು ಗಂಡು ಹೀಗೆ ವ್ಯವಸ್ಥೆ ಮಾಡಿಯೇ ಪ್ರತಿಯೊಬ್ಬರನ್ನು ಹುಟ್ಟಿಸಿರುತ್ತಾನೆ ಎಂದು ಬಹುಜನರು ನಂಬಿರುತ್ತಾರೆ. ಆದರೆ, ವಸ್ತುಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಕಳೆದ ಒಂದು ಶತಮಾನದ ಅವಧಿಯಲ್ಲಿ ನಮ್ಮ ದೇಶದ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಸತತವಾಗಿ ಕಡಿಮೆಯಾಗುತ್ತಿದೆ ಎಂಬ ವಿಶೇಷ ವಿಚಾರ ಈ ಕೃತಿಯಲ್ಲಿ ಕಂಡುಬರುತ್ತದೆ. ಭಾರತೀಯ ಆಧುನಿಕ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಸ್ತ್ರೀ ಶೋಷಣೆ ಮತ್ತು ಸಂರಕ್ಷಣೆಯೇ  ಬಹುದೊಡ್ಡ ಸಮಸ್ಯೆ. ಪ್ರತಿದಿನ ಮಾಧ್ಯಮಗಳು ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಯ ಬಗ್ಗೆ ವರದಿ ಮಾಡುತ್ತಿರುವುದನ್ನು ನೋಡಿದಾಗ ನಾಗರಿಕ ಸಮಾಜ ಯಾವ ದಿಕ್ಕಿನತ್ತ ಸಾಗಿದೆ ಎಂಬುದನ್ನು ಅರಿಯಲು ಸಾಧ್ಯವಾಗುತ್ತಿಲ್ಲ ಎಂಬ ಅಂಶವು ಇಲ್ಲಿ ನಮಗೆ ತಿಳಿದು ಬರುತ್ತದೆ.

ನಮ್ಮ ಕನ್ನಡ ಸಾಹಿತ್ಯದಲ್ಲಿ ವೈದ್ಯ ಸಾಹಿತ್ಯ ಮರೆಯಾಗುತ್ತಿರುವ ಸಂದರ್ಭದಲ್ಲಿ ಡಾ. ಕರವೀರ ಪ್ರಭು ಕ್ಯಾಲಕೊಂಡ ಅವರು ವೈದ್ಯ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ.  ನೂರಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಕನ್ನಡ ನಾಡಿನಲ್ಲಿ ವೈದ್ಯ ಸಾಹಿತ್ಯ ಹುಲುಸಾಗಿ ಬೆಳೆಯಲು ಶ್ರಮಿಸುತ್ತಿದ್ದಾರೆ. ಈ ಕೃತಿಯ ಒಡಲಾಳದಲ್ಲಿ ಇರುವ ಲೇಖನಗಳು ಹೆಣ್ಣು ಭ್ರೂಣ ಹತ್ಯೆ ವಿಷಯದ ಬವಣೆಗಳನ್ನು ವೈದ್ಯಶಾಸ್ತ್ರದ ಹಾಗೂ ವೈದ್ಯ ಸಾಹಿತ್ಯದ ಮೂಲಕ ವೈಚಾರಿಕವಾಗಿ ಸೆರೆಹಿಡಿದಿರುವುದನ್ನು ಕಾಣಬಹುದು. ಹೆಣ್ಣು ಭ್ರೂಣ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಶೋಧ, ಅಂತರ್ಶೋಧ, ಸಂಶೋಧ, ಬಹುಶೋಧ, ವೈಚಾರಿಕಶೋಧದ ಮಾನದಂಡಗಳನ್ನು ಬಳಸಿ ಈ ಕೃತಿ ರಚಿಸಿದ್ದಾರೆ ಎಂದು ಹೇಳಬಹುದು.

ಒಟ್ಟಾರೆ, ಕನ್ನಡ ಸಾಹಿತ್ಯದಲ್ಲಿ ವೈದ್ಯ ಸಾಹಿತ್ಯಕ್ಕೆ ಒಂದು ನೆಲೆ ಕಲ್ಪಿಸಿಕೊಟ್ಟಂತಹ ಹಾಗೂ ಆ ನೆಲೆಯ ಸೂಕ್ಷ್ಮ ಸಂವೇದನೆಗಳನ್ನು   ಅಕ್ಷರ ರೂಪದಲ್ಲಿ ಪೋಣಿಸಿ ಕನ್ನಡ ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿನೆಲೆ ಕಂಡುಕೊಂಡಿರುವ ಡಾ. ಕರವೀರಪ್ರಭು ಕ್ಯಾಲಕೊಂಡ ಅವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಹಾರೈಸೋಣ.

ಡಾ.ಆರ್. ನಾಗರಾಜು
ಸಾಹಿತಿ, ಸಂಸ್ಕೃತಿ ಚಿಂತಕ
ಮೊ: 9449527544    

Related Posts

Leave a Reply

Your email address will not be published. Required fields are marked *