ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇನ್ಮುಂದೆ ಅರ್ಜಿಯನ್ನು ಸ್ವೀಕರಿಸದೆ, ಸಾಧನೆಯನ್ನು ಗುರುತಿಸಿ ಅರ್ಹರಿಗೆ ಪ್ರಶಸ್ತಿ ನೀಡುವ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಿ ಅವರು ಮಾತನಾಡಿದರು.
ಪ್ರಶಸ್ತಿಗಳು ಕೇಳಿ ಪಡೆಯುವಂತೆ ಆಗಬಾರದು. ಅರ್ಹರನ್ನು ಗುರುತಿಸಿ, ಅವರ ಮನೆ ಬಾಗಿಲಿಗೆ ಪ್ರಶಸ್ತಿ ನೀಡಿ ಗೌರವಿಸುವಂತೆ ಆಗಬೇಕು. ಇದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೂ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗುತ್ತಿತ್ತು. ನಾನು ಜಿಲ್ಲಾ ಪ್ರವಾಸಕ್ಕೆ ಹೋದರೆ ಅರ್ಜಿ ಹಾಗೂ ದಾಖಲೆಗಳನ್ನು ಇಟ್ಟುಕೊಳ್ಳಲು ಜೊತೆಯಲ್ಲಿ ಹೆಚ್ಚುವರಿ ಕಾರನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಕಳೆದ ಬಾರಿ ಅರ್ಜಿ ಹಾಕದ ಅಂದಾಜು 25ಕ್ಕೂ ಹೆಚ್ಚು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉದಾಹರಣೆಗೆ ಕೊಪ್ಪಳ ಜಿಲ್ಲೆಯ ವೃದ್ಧೆ ಹುಚ್ಚವ್ವ ಎಂಬುವರು ತಮ್ಮ ಕೋಟ್ಯಂತರ ಬೆಲೆಬಾಳುವ ಎರಡು ಎಕರೆ ಜಾಗವನ್ನು ಶಾಲೆಗೆಂದು ನೀಡಿ ಔದಾರ್ಯತೆ ಮೆರೆದಿದ್ದರು. ಇಂತಹವರನ್ನು ಗುರುತಿಸಿ ಪ್ರಶಸ್ತಿ ನೀಡಿದ ತೃಪ್ತಿ ಇದೆ ಎಂದರು.
ಸಾರ್ವಜನಿಕವಾಗಿ ಚರ್ಚೆ ನಡೆಯಲಿ:
ಅರ್ಜಿ ಸ್ವೀಕರಿಸದೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾಡಿನ ಸಾಹಿತಿಗಳು ಸಮ್ಮತಿಸಿದ್ದು, ಈ ಬಗ್ಗೆ ಇನ್ನಷ್ಟು ಉತ್ತಮ ಸಲಹೆಗಳು ಬರಲಿ. ಈ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗಲಿ. ಇನ್ನು ಪ್ರಶಸ್ತಿ ನೀಡಿಕೆ ವಿಷಯದಲ್ಲಿ ನಮ್ಮ ಸರ್ಕಾರ ಸಮಾಜಿಕ ನ್ಯಾಯವನ್ನು ಪರಿಪಾಲನೆ ಮಾಡುತ್ತಿದೆ. ಅದನ್ನೇ ಮುಂದೆಯೂ ಕೂಡ ಮುಂದುರೆಸಲಾಗುವುದು ಎಂದು ಹೇಳಿದರು.
ಇನ್ನು ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ ಮೂರು ವರ್ಷ ಯಾವುದೇ ಪ್ರಶಸ್ತಿ ನೀಡದೆ, ಕೈ ಬಿಟ್ಟಿತ್ತು. ನಾವು ಅಧಿಕಾರಕ್ಕೆ ಬಂದ ಕೂಡಲೇ 25 ವಿಭಾಗದಲ್ಲಿ 75 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ, ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಕ ಮಾಡುವ ಮೂಲಕ ಅಕಾಡೆಮಿಗಳಿಗೆ ಶಕ್ತಿ ತುಂಬುವ ಕೆಲಸ ಆಗಿದೆ.
ಪರಿಣಾಮ ಬೆಂಗಳೂರಿಗೆ ಮಾತ್ರ ಸಿಮೀತವಾಗಿದ್ದ ಅಕಾಡೆಮಿ ಮತ್ತು ಪ್ರಾಧಿಕಾರಗಳ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯುತ್ತಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಇಲಾಖೆ ನಿರ್ದೇಶರಾದ ಗಾಯತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.