ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ, ಕೃಷಿ ಮಾರುಕಟ್ಟೆ ಸಚಿವ ಎಸ್. ಶಿವಾನಂದ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ ನಗರ ಶಾಸಕ ಬಸವನಗೌಡ ಆರ್. ಪಾಟೀಲ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ಕ್ಷೇತ್ರ ಬಸವನಬಾಗೇವಾಡಿಯಿಂದ ಸ್ಪರ್ಧಿಸುವುದಾಗಿ ಸವಾಲು ಹಾಕಿದ್ದಾರೆ.
ನಾನು ಅವರ ಸವಾಲನ್ನು ಸ್ವೀಕರಿಸಿ, ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಅವರ ವಿರುದ್ಧ ಅಭ್ಯರ್ಥಿಯಾಗಿ ಕಣಕ್ಕಿಳಿದು ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಸವಾಲು ಹಾಕಿರುವಂತೆ ಶಾಸಕ ಬಸವನಗೌಡ ಆರ್. ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ರಾಜೀನಾಮೆ ಅಂಗೀಕಾರಗೊಂಡರೆ ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಶಿವಾನಂದ ಪಾಟೀಲ್ ಅವರು ವಿಧಾನಸಭಾ ಅಧ್ಯಕ್ಷರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಬಿಡುಗಡೆಗೊಳಿಸಿದ್ದಾರೆ.