ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಆಯೋಜಿಸಲಾಗಿರುವ ಮೂರು ದಿನಗಳ ರೈತ ದಸರಾ ೨೦೨೫ ಕಾರ್ಯಕ್ರಮಕ್ಕೆ ನಂದಿ ಪೂಜೆಯೊಂದಿಗೆ ನಗಾರಿ ಬಾರಿಸುವ ಮೂಲಕ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಚಾಲನೆ ನೀಡಿದರು. ಇದೇ ವೇಳೆ ಹಳ್ಳಿಕಾರ್ ಎತ್ತಿಗೆ ಪೂಜೆ ಸಲ್ಲಿಸಿದರು.
ರೈತ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ದಸರಾ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವುದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ. ನಾವು ಹಿಂದೆ ನಡೆದು ಬಂದ ವಿಚಾರಗಳನ್ನು ಮುಂದುವರೆಸುವಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಕಾಪಾಡಿಕೊಳ್ಳುವಲ್ಲಿ ನಮ್ಮ ನಾಡಿನ ರೈತರು ಎಂದೆಂದಿಗೂ ಸಹ ಮುಂದು. ಈ ಬಾರಿ ರೈತ ದಸರಾದಲ್ಲಿ ರೈತರಿಗೆ ಹೆಚ್ಚು ಅವಕಾಶ ನೀಡಬೇಕು, ರೈತರ ಬದುಕಿಗೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಪಶುಸಂಗೋಪನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ . ವೆಂಕಟೇಶ್ ಅವರು ಮಾತನಾಡಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ರೈತರು ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು ತುಂಬಾ ಮುಖ್ಯ. ರೈತರಿಗೆ ಕೃಷಿಯಲ್ಲಿ ಆಧುನಿಕ ಬದ್ಧತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು ಬಹಳ ಮುಖ್ಯ ಎಂದರು.
ಈ ಬಾರಿಯ ರೈತ ದಸರಾದಲ್ಲಿ ಹೊಸ ಹೊಸ ತಂತ್ರಜ್ಞಾನದ ಪರಿಚಯ ಮಾಡುವುದು, ಅವುಗಳ ಉಪಯೋಗದ ಬಗ್ಗೆ ತಿಳಿ ಸುವಂತಹ ಕೆಲಸ ಮಾಡುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ದೇವರಾಜ ಅರಸು ರಸ್ತೆಯ ಮೂಲಕ ಜೆ. ಕೆ ಗ್ರೌಂಡ್ ವರೆಗೂ ಸಾಗಿದ ರೈತ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು. ಈ ಬಾರಿ ಮೆರವಣಿಗೆಯಲ್ಲಿ ನಗಾರಿ ಹಾಗೂ ತಮಟೆ, ವೀರಗಾಸೆ, ವೀರಗಾಸೆ ವೀರಭದ್ರ ನೃತ್ಯ, ಖಡ್ಗ ಪ್ರದರ್ಶನ, ಕಂಸಾಳೆ ನೃತ್ಯ, ಚಿಲಿಪಿಲಿ ಗೊಂಬೆ, ನಾದಸ್ವರ ಪೂಜೆ ಕುಣಿತ ಜೊತೆಗೆ ವಿವಿಧ ತಳಿಯ ಎತ್ತುಗಳು, ಕರುಗಳು, ಆಂಧ್ರ ತಳಿಯಾದ ಪುಂಗನೂರು ಎತ್ತು, ಹೋರಿ,ಹಳ್ಳಿಕಾರ್ ತಳಿ , ಬಂಡೂರು ಕುರಿಗಳು, ಎತ್ತಿನಗಾಡಿ ಎತ್ತುಗಳನ್ನು ಕರೆಸಲಾಗಿತ್ತು.
ಹೊಸ ಹೊಸ ಕೃಷಿ ತಂತ್ರಜ್ಞಾನಗಳಾದ ಭತ್ತ ನಾಟಿ ಯಂತ್ರ, ಬೆಳೆ ಸಿಂಪಡಿಸುವ ಡ್ರೋನ್ ತಂತ್ರಜ್ಞಾನ ಯಂತ್ರ, ಇಪ್ಕೋ ನ್ಯಾನೋ ಯೂರಿಯಾ ಲಿಕ್ವಿಡ್, ಸ್ವರಾಜ್ ಯಂತ್ರ, ಕಿಸಾನ್ ಬಂಡಿ, ಪವರ್ ಇಂಟರ್ ಕಲ್ಟಿವೇಟರ್ ಯಂತ್ರ, ,ಕಳೆ ತೆಗೆಯುವ ಯಂತ್ರ, ಹೈಟೆಕ್ ಹಾರ್ವೆಸ್ಟರ್ ಹಬ್ ಬಹು ಬೆಳೆಯ ಒಕ್ಕಣೆ ಯಂತ್ರ, ಭತ್ತದ ಬೇಲರ್, ಕಬ್ಬು ನಾಟಿ ಯಂತ್ರ, ಕಬ್ಬು ಕಟಾವು ಯಂತ್ರ ತೋಟಗಾರಿಕೆ ಇಲಾಖೆಯ ಟ್ಯಾಬ್ಲೋಗಳಂತಹ ಹೊಸ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಿ ಕೊಡಲಾಯಿತು.
ಈ ಸಂಧರ್ಭದಲ್ಲಿ ಶಾಸಕರಾದ ಕೆ. ಹರೀಶ್ ಗೌಡ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷ ರಮೇಶ್ ಬಂಡಿ ಸಿದ್ದೇಗೌಡ, ರೈತ ದಸರಾದ ಕಮಿಟಿಯ ಅಧ್ಯಕ್ಷರಾದ ಯೋಗೇಶ್ ಹಾಗೂ ರೈತ ಮುಖಂಡರು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.