ಬೆಂಗಳೂರು: ಶಾಲೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಸ್ಥೆಗಳು. ಕೈಗಾರಿಕೆಗಳಿಗೆ ಗ್ರಾಮಗಳಿಂದ ಸಂಪರ್ಕ ಕಲ್ಪಿಸುವ ಕಲ್ಯಾಣಪಥ ಹಾಗೂ ಪ್ರಗತಿಪಥ ಸರ್ಕಾರದ ಮಹತ್ತರ ಯೋಜನೆಗಳಾಗಿದ್ದು, ಗ್ರಾಮೀಣ ಬದುಕಿನ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಬಲ್ಲ ಈ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪಂಚಾಯತ್ ರಾಜ್ ಇಲಾಖೆಯ ಎಂಜನಿಯರುಗಳಿಗೆ ಸೂಚನೆ ನೀಡಿದರು.
ಸಚಿವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಮುಕ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಎಂಜನಿಯರುಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಲ್ಯಾಣಪಥ ಯೋಜನೆಗಾಗಿ ಸರ್ಕಾರ ಈ ಬಾರಿಯ ಆಯವ್ಯದಲ್ಲಿ 1000 ಕೋಟಿ ರೂ ಅನುದಾನ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಇಷ್ಟು ದೊಡ್ಡ ಮೊತ್ತದ ಆರ್ಥಿಕ ನೆರವನ್ನು ಮೊದಲ ಬಾರಿಗೆ ಒದಗಿಸಿದೆ, ಸರ್ಕಾರ ನೀಡಿರುವ ಅನುದಾನದಿಂದ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಎಂಜನಿಯರುಗಳ ಮೇಲಿದೆ, ಯಾವುದೇ ಲೋಪವಿಲ್ಲದಂತೆ ದೀರ್ಘಕಾಲ ಬಾಳಿಕೆ ಬರುವಂತೆ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.
ಪ್ರಗತಿಪಥ ಯೋಜನೆಗಾಗಿ ಸರ್ಕಾರ 5200 ಕೋಟಿ ಅನುದಾನ ಒದಗಿಸಿದ್ದು, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯು ಅನುಮೋದನೆ ನೀಡಲು ಏಷ್ಯನ್ ಡೆವಲೆಪ್‌ಮೆಂಟ್ ಬ್ಯಾಂಕಿಗೆ ಸೂಚನೆ ನೀಡಿದೆ, ಬ್ಯಾಂಕಿನ ತಂಡವು ಈಗಾಗಲೆ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದೆ, ಈ ನಡುವೆ ಇಲಾಖೆಯು ರಸ್ತೆಗಳ ಪೂರ್ಣ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದೆ ಎಂದು ಸಬೆಯಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.
ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆ ನಿರ್ಮಾಣ ಕಾಮಗಾರಿಗಳ ವಿನಃ ಬೇರಾವುದೆ ಸರಕು ಸರಬರಾಜಿನಂತಹ ಪ್ರಕ್ರಿಯೆಗಳಲ್ಲಿ ತೊಡಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ ಸಚಿವರು, ಹೊಸ ಸಂಶೋಧನೆಗಳ ಮೂಲಕ ಮತ್ತಷ್ಟು ಬಾಳಿಕೆ ಬರುವಂತಹ ಸಾಮಗ್ರಿಗಳನ್ನು ನಿರ್ಮಾಣದಲ್ಲಿ ಬಳಸುವ ಮೂಲಕ ಸುಧಾರಣೆಗಳನ್ನು ತರಬೇಕೆಂದು ಸಲಹೆ ಮಾಡಿದರು. ಎಂಜನಿಯರಿಂಗ್ ಕ್ಷೇತ್ರದ ಸುಧಾರಣೆಗಳಿಗಾಗಿ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಮಾಡುವ ಸಂಬಂಧ ಹಿರಿಯ ಎಂಜನಿಯರ್ ಗಳು ಮತ್ತು ಉತ್ಸಾಹಿ ಕಿರಿಯ ಎಂಜನಿಯರ್‌ಗಳನ್ನು ಒಳಗೊಂಡ ಸಮಿತಿ ರಚಿಸಿ ವರದಿ ಪಡೆಯಲು ಸಚಿವರು ಸಲಹೆ ಮಾಡಿದರು.
ಗ್ರಾಮಗಳ ಜಲಮೂಲಗಳನ್ನು ಸುಸ್ಥಿರಗೊಳಿಸುವ ಮತ್ತು ವಿದ್ಯುತ್ ಭದ್ರತೆ ನೀಡುವ ಹೊಸ ಪರಿಕಲ್ಪನೆ ಇಲಾಖೆ ಹೊಂದಿದ್ದು, ಗ್ರಾಮಗಳ ಕೆರೆಗಳು ಸೇರಿದಂತೆ ಜಲಮೂಲಗಳನ್ನು ಸಂರಕ್ಷಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಹೊಸತನವನ್ನು ಅಳವಡಿಸಿಕೊಳ್ಳಲು ಸಚಿವರು ಎಂಜನಿಯರುಗಳಿಗೆ ತಿಳಿಸಿದರು.
2022-23ನೆ ಸಾಲಿನಲ್ಲಿ ಅನುಮೋದನೆಯಾದ 27322 ಕಾಮಗಾರಿಗಳಲ್ಲಿ 22712 ಕಾಮಗಾರಿಗಳು ಪೂರ್ಣಗೊಂಡಿದ್ದು, 3100 ಕಾಮಗಾರಿಗಳು ಪ್ರಗತಿಯಲ್ಲಿವೆ; 2023-24ನೆ ಸಾಲಿನಲ್ಲಿ ಅನುಮೋದನೆಯಾದ 23338 ಕಾಮಗಾರಿಗಳ ಪೈಕಿ 15522 ಕಾಮಗಾರಿಗಳು ಪೂರ್ಣವಾಗಿವೆ, 5695 ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ 2024-25ನೆ ಸಾಲಿನಲ್ಲಿ ಅನುಮೋದನೆಗೊಂಡ 25786 ಕಾಮಗಾರಿಗಳಲ್ಲಿ 11916 ಕಾಮಗಾರಿಗಳು ಪೂರ್ಣವಾಗಿದ್ದು 8013 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದೂ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಕಾಮಗಾರಿಗಳು ವಿಳಂಬವಾಗಿರುವ ಪ್ರಕರಣಗಳನ್ನು ಸಚಿವರು ಗಂಭೀರವಾಗಿ ಪರಿಗಣಿಸಿ, ಶಾಸಕರು ಹಾಗೂ ಸಂಸತ್ ಸದಸ್ಯರ ಜೊತೆ ಸಂಪರ್ಕದಲ್ಲಿದ್ದು, ಕಾಮಗಾರಿಗಳನ್ನು ಶೀಘ್ರ ಮುಗಿಸಲು ಬದ್ಧತೆ ಹೊಂದಬೇಕೆಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.