ನವದೆಹಲಿ: ದೇಶದಲ್ಲಿ 2030ರ ವೇಳೆಗೆ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ₹ 8 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮತ್ತು 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಜಿಸಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನವದೆಹಲಿಯಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ “ಹಸಿರು ಹೈಡ್ರೋಜನ್ ಸರಬರಾಜು ಸರಪಳಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME)” ಅವಕಾಶಗಳ ಕುರಿತು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
2030ರ ವೇಳೆಗೆ ದೇಶದಲ್ಲಿ ಸುಮಾರು 125 GW ನವೀಕರಿಸಬಹುದಾದ ಇಂಧನದೊಂದಿಗೆ ವಾರ್ಷಿಕ ಕನಿಷ್ಠ 5 MMT ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿ ಗುರಿ ಹೊಂದಿದೆ. ಇದಕ್ಕಾಗಿ ಒಟ್ಟು ₹ 8 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಯಾಗಲಿದೆ. ಅಲ್ಲದೇ, 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ಪಳೆಯುಳಿಕೆ ಇಂಧನ ಆಮದುಗಳಲ್ಲಿ ₹ 1 ಲಕ್ಷ ಕೋಟಿ ಉಳಿತಾಯವಾಗಲಿದೆ. ಸುಮಾರು 50 MMT ವಾರ್ಷಿಕ ಹಸಿರುಮನೆ ಅನಿಲ ಹೊರಸೂಸುವಿಕೆ ತಗ್ಗಲಿದೆ ಎಂದು ವಿವರಿಸಿದರು.
ಸಿಂಗಾಪುರ, ಜಪಾನ್ ಜತೆ ಭಾರತ ಒಪ್ಪಂದ
ಗ್ರೀನ್ ಹೈಡ್ರೋಜನ್ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮುಂಚೂಣಿಯಲ್ಲಿದ್ದು, ಸಿಂಗಾಪುರ ಮತ್ತು ಜಪಾನ್ ಸೇರಿದಂತೆ ವಿವಿಧ ದೇಶಗಳಿಗೆ ಗ್ರೀನ್ ಹೈಡ್ರೋಜನ್ ಪೂರೈಸಲು ಭಾರತ ಒಪ್ಪಂದ ಮಾಡಿಕೊಂಡಿದೆ. ಸದ್ಯ, ಸಿಂಗಾಪುರದೊಂದಿಗೆ ಗ್ರೀನ್ ಹೈಡ್ರೋಜನ್‌ಗಾಗಿ ಮತ್ತು ಜಪಾನ್‌ನೊಂದಿಗೆ 4 ಲಕ್ಷ 12 ಸಾವಿರ ಟನ್ ಗ್ರೀನ್ ಹೈಡ್ರೋಜನ್ ಉತ್ಪನ್ನಗಳ ಪೂರೈಕೆಗಾಗಿ ಒಪ್ಪಂದ ಮಾಡಿಕೊಂಡಿದೆ. 2030ರ ವೇಳೆಗೆ 5 ಲಕ್ಷ ಮೆಟ್ರಿಕ್ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದನೆ ಗುರಿ ಸಾಧಿಸಲು ಬದ್ಧವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಭಾರತವನ್ನು ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿನ ಜಾಗತಿಕ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಜಾರಿಗೊಳಿಸುತ್ತಿದೆ. ಇದರಿಂದಾಗಿ ಎಂಎಸ್‌ಎಂಇಗಳು ಭಾರತದ ಇಂಧನ ಪರಿವರ್ತನೆಯ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಿದರು.
2030ರ ವೇಳೆಗೆ ಸ್ವಾವಲಂಬಿ ಹಸಿರು ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮಿಷನ್‌ನ ಉದ್ದೇಶಗಳನ್ನು ಸಾಕಾರಗೊಳಿಸುವಲ್ಲಿ ಎಂಎಸ್‌ಎಂಇಗಳು ನಿರ್ಣಾಯಕ ಪಾತ್ರ ವಹಿಸಲಿವೆ. ತಂತ್ರಜ್ಞಾನ ಆಧಾರಿತ ಮತ್ತು ವಿಕೇಂದ್ರೀಕೃತ ಹಸಿರು ಹೈಡ್ರೋಜನ್ ಆರ್ಥಿಕತೆಯನ್ನು ನಿರ್ಮಿಸುವ ಕಡೆಗೆ MNRE ಬದ್ಧತೆ ತೋರಿದೆ ಎಂದು ಹೇಳಿದರು.
ಹಸಿರು ಹೈಡ್ರೋಜನ್ ಪ್ರಾಮಾಣೀಕರಣ ಯೋಜನೆಗೆ ಚಾಲನೆ: ಇದೇ ವೇಳೆ ಸಚಿವ ಪ್ರಲ್ಹಾದ ಜೋಶಿ ಅವರು, ಭಾರತದ ಹಸಿರು ಹೈಡ್ರೋಜನ್ ಪ್ರಮಾಣೀಕರಣ ಯೋಜನೆ (GHCI)ಗೆ ಚಾಲನೆ ನೀಡಿ, ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಪ್ರಮಾಣೀಕರಿಸಲು ಮತ್ತು ಪಾರದರ್ಶಕತೆ, ಮಾರುಕಟ್ಟೆ ವಿಶ್ವಾಸಾರ್ಹತೆಗೆ ಈ ಯೋಜನೆ ಅಡಿಪಾಯವಾಗಿದೆ ಎಂದು ಹೇಳಿದರು.
ಖಾಸಗಿ ಹೂಡಿಕೆ ಪ್ರೋತ್ಸಾಹಕ್ಕೆ ಚರ್ಚೆ: MSMEಗಳು, ನೀತಿ ನಿರೂಪಕರು, ತಂತ್ರಜ್ಞಾನ ಪೂರೈಕೆದಾರರು, ಉದ್ಯಮ ಸಂಘಗಳು ಮತ್ತು ಅಂತರಾಷ್ಟ್ರೀಯ ಪಾಲುದಾರರು ಸೇರಿದಂತೆ 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಾಗಾರದಲ್ಲಿ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಮುಖ ಚರ್ಚೆ ನಡೆಸಲಾಯಿತು. ಅಲ್ಲದೇ, ಹಸಿರು ಹೈಡ್ರೋಜನ್ ಪರಿಸರ ವ್ಯವಸ್ಥೆಯಲ್ಲಿ ತ್ವರಿತ ಹೂಡಿಕೆ ಹಾಗೂ ವಿಶ್ವ ಬ್ಯಾಂಕ್, ಐಆರ್‌ಇಡಿಎ, ಕೆಎಫ್‌ಡಬ್ಲ್ಯೂ ಮತ್ತು ಐಐಎಫ್‌ಸಿಎಲ್ ಸೇರಿದಂತೆ ಹಣಕಾಸು ಸಂಸ್ಥೆಗಳಿಂದ ಎಂಎಸ್‌ಎಂಇಗಳಿಗೆ ಹಸಿರು ಕ್ರೆಡಿಟ್ ಮಾರ್ಗಗಳನ್ನು ವಿನ್ಯಾಸಗೊಳಿಸುವ ಬಗ್ಗೆ ಅಗತ್ಯ ಚರ್ಚೆ ನಡೆಸಲಾಯಿತು. MNRE ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಮತ್ತಿತರ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.