ಕರ್ನಾಟಕ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಅಕ್ಟೋಬರ್ ತಿಂಗಳಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ನಡೆದ ತನಿಖೆಯಲ್ಲಿ ಕೇಂದ್ರ ಸರ್ಕಾರ 7.70 ಲಕ್ಷ ಪಡಿತರ ಚೀಟಿಗಳನ್ನು ಅನರ್ಹವೆಂದು ಗುರುತಿಸಿದೆ ಎಂದು ತಿಳಿಸಿದರು. ರಾಜ್ಯದಲ್ಲಿಯೂ ಈಗಾಗಲೇ 13 ಲಕ್ಷ ಅನರ್ಹ ಕಾರ್ಡ್‌ಗಳನ್ನು ಪತ್ತೆಹಚ್ಚಿ ಪಟ್ಟಿಯನ್ನು ತಯಾರಿಸಲಾಗಿದೆ. ಇನ್ನೂ ಅನರ್ಹ ಬಿಪಿಎಲ್ ಕಾರ್ಡ್‌ದಾರರು ಇದ್ದರೆ, ತಮ್ಮ ಕಾರ್ಡ್ ಅನ್ನು ಎಪಿಎಲ್‌ನಲ್ಲಿ ಪರಿವರ್ತಿಸಿಕೊಳ್ಳಲು ಸ್ವಯಂಪ್ರೇರಿತರಾಗಿ ಮುಂದಾಗಬೇಕು. ಇದರಿಂದ ನಿಜವಾದ ಬಿಪಿಎಲ್ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ದೊರೆಯಲಿದೆ.
ಹಿಂದಿನ ಕೆಲ ಸರ್ಕಾರಗಳು ಪರಿಶೀಲನೆ ನಡೆಸದೇ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸುತ್ತಿದ್ದವು. ಐದಾರು ಲಕ್ಷಕ್ಕಿಂತ ಅಧಿಕ ವೆಚ್ಚದ ಮನೆಯವರು ಆರ್ಥಿಕವಾಗಿ ಸ್ಥಿರರಾಗಿರುವುದು ಸ್ಪಷ್ಟ; ಇಂತಹವರಿಗೆ ಬಿಪಿಎಲ್ ಕಾರ್ಡ್ ಅಗತ್ಯವಿದೆಯೇ? ಸ್ವಂತ ಮನೆ ಕಟ್ಟುವ ಶಕ್ತಿ ಇರುವವರು ಬಿಪಿಎಲ್ ವ್ಯಾಪ್ತಿಗೆ ಬರುವುದೇ ಸರಿ? ಎಂದು ಸಚಿವರು ಪ್ರಶ್ನಿಸಿದರು.
ಈ ಹಿನ್ನಲೆಯಲ್ಲಿ ಈಗ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಪುನಃಪರಿಶೀಲನೆ ನಡೆಯುತ್ತಿದೆ. ತಪ್ಪಾಗಿ ಎಪಿಎಲ್‌ಗೆ ಬದಲಾಯಿಸಿರುವ ಪಡಿತರ ಚೀಟಿಗಳ ಫಲಾನುಭವಿಗಳು ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಒಂದು ದಿನದೊಳಗೆ ಆಹಾರ ಧಾನ್ಯ ಸೌಲಭ್ಯ ಒದಗಿಸಲಾಗುತ್ತದೆ. ಈ ಪರಿಷ್ಕರಣೆ ಪೂರ್ಣಗೊಳ್ಳುವ ನಂತರ, ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.