ವಿಜಯಪುರ ಜಿಲ್ಲೆಯಲ್ಲಿ ನಿರಂತರ ಮಳೆಯ ಪರಿಣಾಮವಾಗಿ ಹಲವು ಭಾಗಗಳು ಪ್ರವಾಹದ ಭೀತಿಯಲ್ಲಿದ್ದು, ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಭೀಮಾನದಿ ಉಕ್ಕಿ ಹರಿಯುತ್ತಿರುವುದರಿಂದ ಇಂಡಿ ತಾಲ್ಲೂಕಿನ ರೋಡಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಗಂಭೀರ ಹಾನಿಗೆ ಒಳಗಾಗುತ್ತಿದ್ದು, ಸಚಿವರು ಸ್ವತಃ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ರೋಡಗಿ ಗ್ರಾಮದಲ್ಲಿ ಮಳೆಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದ ಎಂ. ಬಿ. ಪಾಟೀಲ ಅವರು ಗ್ರಾಮಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದರು. “ಪರಿಸ್ಥಿತಿಯನ್ನು ಜಿಲ್ಲಾಡಳಿತ ಸಮರ್ಥವಾಗಿ ನಿರ್ವಹಿಸುತ್ತಿದೆ. ಯಾರೂ ಭಯಪಡುವ ಅಗತ್ಯವಿಲ್ಲ. ಸರಕಾರದ ವತಿಯಿಂದ ಲಭ್ಯವಿರುವ ಎಲ್ಲ ರೀತಿಯ ಪರಿಹಾರವನ್ನು ಒದಗಿಸಲಾಗುತ್ತದೆ” ಎಂದು ಭರವಸೆ ನೀಡಿದರು.
ಭೀಮಾನದಿ ಪ್ರವಾಹದ ಭೀತಿಯಲ್ಲಿರುವ ಇಂಡಿ ತಾಲ್ಲೂಕಿನ ರೋಡಗಿ ಗ್ರಾಮಕ್ಕೆ ತೆರಳಿ ಮಳೆಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದೆ. ಸಾರ್ವಜನಿಕರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿ, ಪರಿಸ್ಥಿತಿಯನ್ನು ಜಿಲ್ಲಾಡಳಿತ ಸಮರ್ಥವಾಗಿ ಎದುರಿಸುತ್ತಿದ್ದು ಯಾರೂ ಭಯಪಡುವ ಅಗತ್ಯವಿಲ್ಲವೆಂದು ಅಭಯ ನೀಡಿದೆ. ನಮ್ಮ ಸರಕಾರದಿಂದ ಲಭ್ಯವಿರುವ ಪರಿಹಾರವನ್ನು ದೊರಕಿಸಿಕೊಡುವ ಭರವಸೆ ನೀಡಲಾಯಿತು ಎಂದು ಎಂ. ಬಿ. ಪಾಟೀಲ ಟ್ವೀಟ್ ಮಾಡಿದ್ದಾರೆ.
ಅದೇ ರೀತಿ, ಖೇಡಗಿ ಗ್ರಾಮದಲ್ಲಿರುವ ಖೇಡಗಿ ಮಠವು ಭೀಮಾನದಿಯ ನೀರಿನಿಂದ ಸುತ್ತುವರೆದಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಜಿಲ್ಲಾಡಳಿತ ಜನರ ಮತ್ತು ಜಾನುವಾರುಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸೂಚನೆ ನೀಡಿದರು. ನದಿಪಾತ್ರಗಳಿಂದ ದೂರ ಉಳಿಯುವಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಹಾಗೂ ಸ್ಥಳೀಯ ಮುಖಂಡರು ಸಚಿವರ ಜೊತೆಗಿದ್ದರು.
ನಿರಂತರ ಮಳೆಯಿಂದ ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.