ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಚನ್ನರಾಜ ಅವರು ಪ್ರಯಾಣಿಸುತ್ತಿದ್ದ ಕಾರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಅಪಘಾತವಾಗಿದೆ. ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಈ ದುರ್ಘಟನೆ ನಡೆದಿದೆ.
ಸಂಕ್ರಾಂತಿ ಹಬ್ಬದ ದಿನವಾದ ಇಂದು (ಮಂಗಳವಾರ) ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಕಾರು ಗುದ್ದಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾರಿನಲ್ಲಿದ್ದವರಿಗೆ ದೊಡ್ಡ ಅಪಾಯವಾಗಿಲ್ಲ, ಸಣ್ಣ ಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಚಿವೆ ಹೆಬ್ಬಾಳ್ಕರ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಮಾತನಾಡಿ, ಹೆಬ್ಬಾಳ್ಕರ್ ಅವರ ಬೆನ್ನಿನ ಎಲ್ 1 ಮತ್ತು ಎಲ್ 4 ಮೂಳೆ ಮುರಿತವಾಗಿದೆ. ಕುತ್ತಿಗೆಗೆ ಪೆಟ್ಟಿಗೆ ಬಿದ್ದಿದೆ. ಮೆದುಳು ಬಾವು ಬಂದಿದೆ. ಹೀಗಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ಹೇಳಿದರು.