Menu

ಅಭಿವೃದ್ಧಿ ಕಾರ್ಯ ತ್ವರಿತಗೊಳಿಸಲು ಅಧಿಕಾರಿಗಳಿಗೆ ಸಚಿವ ಕೆಜೆ ಜಾರ್ಜ್ ಸೂಚನೆ

kj george

ಬೆಂಗಳೂರು: ಇಂಧನ ಸಚಿವ ಕೆ.ಜೆ.ಜಾರ್ಜ್ ಬುಧವಾರ ತಮ್ಮ ಸ್ವಕ್ಷೇತ್ರ ಸರ್ವಜ್ಞನಗರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿ, ಕೆಲಸ ತ್ವರಿತಗೊಳಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವಜ್ಞನಗರ ಕ್ಷೇತ್ರದಲ್ಲಿ ನವೀಕೃತ ಸ್ಮಶಾನ ಉದ್ಘಾಟನೆ ನೆರವೇರಿಸಿದ ಅವರು, ವಿವಿಧೆಡೆ ಪಾದಚಾರಿ ಮಾರ್ಗ ಮತ್ತು ವೈಟ್ ಟ್ಯಾಪಿಂಗ್ ಕಾಮಗಾರಿ ಪರಿಶೀಲನೆ ಮಾಡಿದರು. ಅಲ್ಲದೆ, ತ್ಯಾಜ್ಯ ಸಾಗಣಿಕೆ ಕೇಂದ್ರಕ್ಕೆ ತೆರಳಿ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿದರು.

ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, “ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಮೂಲ ಸೌಕರ್ಯ ಕಲ್ಪಿಸುವ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು,” ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಚಿವರು ಕಲ್ಯಾಣ ನಗರದಲ್ಲಿ ಆರಂಭವಾದ ಬ್ರ್ಯೂ ಲಾ ಪಾಕ್ಸಿ ಕೆಫೆಯನ್ನು ಉದ್ಘಾಟಿಸಿದರು. ಬಳಿಕ ನಾಗವಾರ ಮುಖ್ಯ ರಸ್ತೆಯ ಉಮರ್ ನಗರದ ಮಸ್ಜಿದ್-ಇ-ಉಮರ್ ಬಿನ್ ಕತ್ತಾಬ್ ನಲ್ಲಿ ನವೀಕರಣಗೊಂಡ ಸ್ಮಶಾನವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ನಾಗವಾರ ಮುಖ್ಯ ರಸ್ತೆ, ಗೋವಿಂದಪುರ ರಸ್ತೆ, ಹೆಣ್ಣೂರು ಮುಖ್ಯ ರಸ್ತೆ, ನೆಹರೂ ರಸ್ತೆಗಳಲ್ಲಿ ಕೈಗೊಂಡಿರುವ ಫುಟ್ ಪಾತ್, ವೈಟ್ ಟ್ಯಾಪಿಂಗ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಅಲ್ಲದೆ, ಎಚ್ ಬಿಆರ್ ಲೇಔಟ್ ನಲ್ಲಿರುವ ತ್ಯಾಜ್ಯ ಸಾಗಣಾ ಕೇಂದ್ರವನ್ನು ವೀಕ್ಷಿಸಿದರು.

ಉಮರ್ ನಗರದ ಮಸ್ಜಿದ್-ಇ-ಉಮರ್ ಬಿನ್ ಕತ್ತಾಬ್ ನಲ್ಲಿ ನವೀಕರಣಗೊಂಡ ಸ್ಮಶಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, “ಸರ್ವಜ್ಞನಗರ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರಿದ್ದು, ಎಲ್ಲರಿಗೂ ಅಗತ್ಯ ಸೌಲಭ್ಯಗಳನ್ನು ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ,” ಎಂದು ಹೇಳಿದರು.

“ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಎಲ್ಲಾ ಸಮುದಾಯಗಳನ್ನು ಒಂದೇ ರೀತಿ ಕಾಣುತ್ತಿದೆ. ಆದರೆ, ಕೆಲವರು ಜಾತಿ, ಧರ್ಮಗಳ ಮಧ್ಯೆ ವೈಷಮ್ಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ಅವಕಾಶ ಮಾಡಿಕೊಡದೆ ಎಲ್ಲರಿಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕ್ಷೇತ್ರವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸುವುದು ನಮ್ಮ ಉದ್ದೇಶ,” ಎಂದರು.

ಸ್ಥಳೀಯ ಕಾಂಗ್ರೆಸ್ ಮುಖಂಡರು, ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಸಚಿವರ ಭೇಟಿ ವೇಳೆ ಆ ಭಾಗದ ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಗಳನ್ನು ಹೇಳಿಕೊಂಡರಲ್ಲದೆ, ಅವುಗಳನ್ನು ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.

Related Posts

Leave a Reply

Your email address will not be published. Required fields are marked *