Wednesday, February 05, 2025
Menu

ಸ್ವದೇಶಿ ನಿರ್ಮಿತ ರೇಡಿಯೋ ಕಾಲರ್ ಲೋಕಾರ್ಪಣೆ ಮಾಡಿದ ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಕೊಡಗು, ಚಿಕ್ಕಮಗಳೂರು, ಹಾಸನ ಸುತ್ತಮುತ್ತ ಆನೆಗಳು ನಾಡಿನಲ್ಲೇ ಸಂಚರಿಸುತ್ತಿದ್ದು, ಸಾಮಾನ್ಯವಾಗಿ ಗುಂಪಿನ ನಾಯಕತ್ವ ವಹಿಸುವ ಹೆಣ್ಣಾನೆಗಳಿಗೆ ದೇಶೀ ನಿರ್ಮಿತ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಆನೆ ಚಲನ ವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಅರಣ್ಯ ಭವನದಲ್ಲಿಂದು ಕರ್ನಾಟಕ ಅರಣ್ಯ ಇಲಾಖೆ ಬೆಂಗಳೂರಿನ ಇನ್‌ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗೂಡಿ ಅಭಿವೃದ್ಧಿಪಡಿಸಿರುವ ವೆಚ್ಚದಕ್ಷ ಕರ್ನಾಟಕ-ಪರಿಶೋಧಿತ ಪತ್ತೆ ಸಾಧನ (ಕೆ.ಪಿ. ಟ್ರ್ಯಾಕರ್) ಎಂಬ ಹೆಸರಿನ ರೇಡಿಯೋ ಕಾಲರ್ ಗಳನ್ನು ಬಂಡೀಪುರ ಮತ್ತು ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ಅಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

6395 ಆನೆಗಳನ್ನು ಹೊಂದಿರುವ ಕರ್ನಾಟಕ ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಆನೆಗಳ ಸಂಖ್ಯೆಗೆ ಅನುಗುಣವಾಗಿ ವನ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ. ಅಮೂಲ್ಯವಾದ ಜೀವ ಉಳಿಸಲು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಸ್ಥಳೀಯರಿಗೆ ಮಾಹಿತಿ ನೀಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.

ಈವರೆಗೆ ದಕ್ಷಿಣ ಆಫ್ರಿಕಾದೇಶದ ಆಫ್ರಿಕನ್ ವೈಲ್ಡ್ ಲೈಫ್ ಟ್ರಾಕಿಂಗ್ ಮತ್ತು ಜರ್ಮನಿಯ ವೆಕ್ಟ್ರೋನಿಕ್ ಸಂಸ್ಥೆಗಳಿಂದ ಈ ರೇಡಿಯೋ ಕಾಲರ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಸಕಾಲದಲ್ಲಿ ಈ ರೇಡಿಯೋ ಕಾಲರ್ ಲಭ್ಯವಾಗುತ್ತಿರಲಿಲ್ಲ, ಜತೆಗೆ ಒಂದು ರೇಡಿಯೋ ಕಾಲರ್ ಗೆ 6.5 ಲಕ್ಷ ರೂ.ವೆಚ್ಚ ತಗುಲುತ್ತಿತ್ತು. ಆದರೆ ಈಗ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ರೇಡಿಯೋ ಕಾಲರ್ ಗೆ 1.80 ಲಕ್ಷ ರೂ. ಆಗುತ್ತದೆ. ಜೊತೆಗೆ ಆಮದು ರೇಡಿಯೋ ಕಾಲರ್ ಗಳ ತೂಕ 16 ರಿಂದ 17 ಕೆ.ಜಿ. ಇರುತ್ತಿತ್ತು. ಆದರೆ ಈಗ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಕಾಲರ್ ಕೇವಲ 7 ಕೆ.ಜಿ. ತೂಕವಿದ್ದು, ಇದು ಹಗುರವಾಗಿರುತ್ತದೆ ಎಂದರು.

ಪರಿಸರ ಸ್ನೇಹಿ ರೇಡಿಯೋ ಕಾಲರ್ :

ಅರಣ್ಯ ಇಲಾಖೆ ತನ್ನ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಪರಿಸರ ಸ್ನೇಹಿಯಾದ ಕಚ್ಚಾವಸ್ತುಗಳನ್ನೇ ಬಳಸಿ ಈ ರೇಡಿಯೋ ಕಾಲರ್ ತಯಾರಿಸಿದ್ದು, ವನ್ಯಜೀವಿಗಳಿಗಾಗಲೀ, ಪರಿಸರಕ್ಕಾಗಲೀ ಅಪಾಯವಾಗುವುದಿಲ್ಲ. ಒಂದೊಮ್ಮೆ ರೇಡಿಯೋ ಕಾಲರ್ ಗಳಲ್ಲಿ ದೋಷ ಕಂಡು ಬಂದರೆ ದುರಸ್ತಿ ಮಾಡಲು, ಬ್ಯಾಟರಿ, ಬಲ್ಬ್, ಸರ್ಕ್ಯೂಟ್ ಬದಲಾಯಿಸಲು ಅವಕಾಶವಿದೆ. ಆದರೆ ಆಮದು ರೇಡಿಯೋ ಕಾಲರ್ ಗಳಲ್ಲಿ ಈ ಅವಕಾಶ ಇರಲಿಲ್ಲ ಎಂದರು.

ಸುರಕ್ಷತೆ ಮತ್ತು ಸಾಮುದಾಯ ಸಬಲೀಕರಣ:

ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ರೇಡಯೋ ಕಾಲರ್ ಗಳಿಂದ ನಮ್ಮ ಕಾಡು ಮತ್ತು ವನ್ಯಜೀವಿಗಳ ಮಾಹಿತಿ ಸೋರಿಕೆ ಆಗುವ ಅಪಾಯವೂ ಇತ್ತು. ಈಗ ದೇಶೀಯವಾಗಿ ಈ ರೇಡಿಯೋ ಕಾಲರ್ ಅಭಿವೃದ್ಧಿ ಪಡಿಸಿರುವುದರಿಂದ ಅಂತಹ ಅಪಾಯ ಇರುವುದಿಲ್ಲ. ದತ್ತಾಂಶ ಕೂಡ ಸ್ಥಳೀಯ ಸರ್ವರ್ ಗಳಲ್ಲಿ ಸುರಕ್ಷತವಾಗಿರುತ್ತದೆ ಎಂದು ಈಶ್ವರ ಖಂಡ್ರೆ ವಿವರಿಸಿದರು.
ಮೊದಲ ಹಂತದಲ್ಲಿ ಆನೆಗಳ ರೇಡಿಯೋ ಕಾಲರ್ ಮಾತ್ರ ಸಿದ್ಧವಾಗಿದೆ. ಹುಲಿ ಮತ್ತು ಚಿರತೆ ಕಾಲರ್‌ ಗಳ ಅಭಿವೃದ್ಧಿಯೂ ಪ್ರಗತಿಯಲ್ಲಿದ್ದು, ಇದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಈಶ್ವರ ಖಂಡ್ರೆ ಮಾಹಿತಿ ನೀಡಿದರು.

ದೇಶೀಯ ಆನೆ ಕಾಲರ್‌ಗಳ ಪರಿಚಯ:

ಕರ್ನಾಟಕ ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಹಾಗೂ ಇನ್‌ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನ ತಾಂತ್ರಿಕ ತಜ್ಞ ಗುರುದೀಪ ಅವರು ಸ್ವದೇಶಿ ಜಿಎಸ್.ಎಂ ಆಧಾರಿತ ಆನೆ ರೇಡಿಯೋ ಕಾಲರ್ ಅಭಿವೃದ್ಧಿ ಪಡಿಸಿದ್ದಾರೆ. ಈ ಕಾಲರ್‌ ಗೆ ಕರ್ನಾಟಕ ಪರಿಶೋಧಿತ ಟ್ರ್ಯಾಕರ್ ಅಥವಾ ಕರ್ನಾಟಕ ಪ್ರಡ್ಯೂಸ್ಡ್ (ಕೆ.ಪಿ. ಟ್ರ್ಯಾಕರ್) ಎಂದು ಹೆಸರಿಸಲಾಗಿದೆ.
ಈ ಸಂದರ್ಭದಲ್ಲಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಎಪಿಸಿಸಿಎಫ್ ಕುಮಾರ್ ಪುಷ್ಕರ್ ಮತ್ತು ಅಜಿತ್ ರೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *