ಬೆಂಗಳೂರು: ಕಾಡ್ಗಿಚ್ಚು ನಿಯಂತ್ರಿಸಲು ಆಯಾ ವಿಭಾಗದ ಪಂಚಾಯ್ತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ಸಹಯೋಗದೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಎಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಅರಣ್ಯ ಭವನದಲ್ಲಿಂದು ವಿಡಿಯೋ ಕಾನ್ಘರೆನ್ಸ್ ಮೂಲಕ ಸಭೆ ನಡೆಸಿದ ಅವರು, ಕಳೆದ ವರ್ಷ ಸುರಿದ ಉತ್ತಮ ಮಳೆಯ ನಡುವೆಯೂ ಈ ಬಾರಿ ಬಿಸಿಲು ಹೆಚ್ಚಳವಾಗಿದ್ದು, ಕಾಡ್ಗಿಚ್ಚಿನ ಅಪಾಯ ಎದುರಿಸಲು ಸರ್ವಸನ್ನದ್ಧರಾಗಿರುವಂತೆ ಸೂಚನೆ ನೀಡಿದರು.
ಉಪಗ್ರಹ ಆಧಾರಿತ ಕಾಡ್ಗಿಚ್ಚು ಮುನ್ನಚ್ಚರಿಕೆ ವ್ಯವಸ್ಥೆಯ ಸಂದೇಶಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ತಿಳಿಸಿದ ಅವರು, ಪದೆ ಪದೆ ಕಾಡ್ಗಿಚ್ಚು ಸಂಭವಿಸುವ ಪ್ರದೇಶಗಳಲ್ಲಿ ಬೆಂಕಿರೇಖೆ ನಿರ್ಮಿಸಲು, ದೈನಂದಿನ ಆಧಾರದಲ್ಲಿ ಪರಾಮರ್ಶೆ ನಡೆಸಿ, ಕಾಡ್ಗಿಚ್ಚು ನಿಯಂತ್ರಣ ಯೋಜನೆ ರೂಪಿಸಿ, ಕ್ಷೇತ್ರಮಟ್ಟದ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿ ಬೆಂಕಿಯಿಂದ ಕಾಡು ನಾಶವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಕಿಡಿಗೇಡಿಗಳು ಕಾಡಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದರೆ ಅಂತಹವರ ವಿರುದ್ಧ ಎಫ್ಐ.ಆರ್. ದಾಖಲಿಸಲು ಮತ್ತು ಪೊಲೀಸ್ ನೆರವು ಪಡೆಯಲು ಸೂಚಿಸಿದ ಸಚಿವರು, ಗ್ರಾಮಸಭೆ, ಸಮುದಾಯ ಸಭೆ ನಡೆಸುವ ಮೂಲಕ ಕಾಡ್ಗಿಚ್ಚು ಕಾಣಿಸಿಕೊಳ್ಳದಂತೆ ಮತ್ತು ಕಾಡ್ಗಿಚ್ಚು ಕಾಣಿಸಿಕೊಂಡ ಕೂಡಲೆ ಅದನ್ನು ನಂದಿಸಲು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದರು.