ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಅಗತ್ಯ ಕ್ರಮ ಜರುಗಿಸಿ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಸ್. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 3 ವರ್ಷಗಳಲ್ಲಿ ನಕಲಿ ಔಷಧ ಮಾರಾಟಗಾರರನ್ನು ಪತ್ತೆ ಹಚ್ಚಿ ಕಲಂ 17 ಬಿ, (b), (c) (d) ಮತ್ತು (e) ರ ಔಷಧ ಮತ್ತು ಕಾಂತಿ ವರ್ಧಕ ಅಧಿನಿಯಮ 1940 ಮತ್ತು ನಿಯಮಗಳಡಿ ಸೂಕ್ತ ಕ್ರಮಕೈಗೊಂಡು ವಿವಿಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಕಳೆದ 3 ವರ್ಷಗಳಲ್ಲಿ ಒಟ್ಟು 20 ನಕಲಿ ಔಷಧ ತಯಾರಿಕಾ ಕಂಪನಿ ಮತ್ತು 01 ಔಷಧ ಮಾರಾಟಗಾರರ ಪ್ರಕರಣಗಳನ್ನು ಪತ್ತೆ ಮಾಡಿ ಮೊಕ್ಕದ್ದಮೆ ಹೂಡಲಾ ಗಿದೆ. 2022-23 ನೇ ಸಾಲಿನಲ್ಲಿ ಒಟ್ಟು 06, 2023-24ನೇ ಸಾಲಿನಲ್ಲಿ ಒಟ್ಟು 10 ನಕಲಿ ಔಷಧ ತಯಾರಕರು ಮತ್ತು 2024-25 ನೇ ಸಾಲಿನಲ್ಲಿ 04 ನಕಲಿ ಔಷಧ ತಯಾರಕರ ಮತ್ತು 01 ನಕಲಿ ಔಷಧ ಮಾರಾಟಗಾರರ ವಿರುದ್ಧ ವಿವಿಧ ಮಾನ್ಯ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಕಾನೂನು ರೀತಿ ಅಗತ್ಯ ಕ್ರಮಗಳನ್ನುಕೈಗೊಳ್ಳಲಾಗಿದೆ. ಈ ಬಗ್ಗೆ ಕೂಡಲೇ Drug Recall policy ಜಾರಿ ಮಾಡುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.