Menu

ಸಿಎಸ್‌ ವಿರುದ್ಧ ಕೀಳು ಹೇಳಿಕೆ: ಎಂಎಲ್ಸಿ ಎನ್‌ ರವಿಕುಮಾರ್‌ ವಿರುದ್ಧ ಕ್ರಮಕ್ಕೆ ಸಚಿವ ಭೋಸರಾಜು ಆಗ್ರಹ

ರಾಜ್ಯ ಸರಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುವಂತಹ ಮುಖ್ಯ ಕಾರ್ಯದರ್ಶಿಗಳು ಹಾಗೂ ಒಬ್ಬ ಮಹಿಳೆಯ ಬಗ್ಗೆ  ಕೀಳು ಹೇಳಿಕೆ ನೀಡಿರುವ ಪರಿಷತ್‌ ಸದಸ್ಯ ರವಿಕುಮಾರ್‌ ವಿರುದ್ದ ಕ್ರಮ ಅಗತ್ಯ ಎಂದು  ಸಚಿವ ಎನ್‌ ಎಸ್‌ ಭೋಸರಾಜು ಹೇಳಿದ್ದಾರೆ.  ರವಿಕುಮಾರ್‌ ವಿರುದ್ದ ಕಠಿಣ ಕ್ರಮದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕು ಎಂದು   ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಮಹಿಳೆಯರ ಬಗ್ಗೆ ಅಸಭ್ಯ ಮತ್ತು ಮಾನಹಾನಿಕರ ಹೇಳಿಕೆ ನೀಡುವುದನ್ನು ರವಿಕುಮಾರ್‌ ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಸಂಸ್ಕೃತಿ ಬಗ್ಗೆ ಗೊಡ್ಡು ಕಾಳಜಿಯನ್ನು ತೋರಿಸುವ ಇವರದ್ದು ಇದೇನಾ ಸಂಸ್ಕೃತಿ ಎಂದು  ಪ್ರಶ್ನಿಸಿದ್ದಾರೆ.

ಕಲಬುರ್ಗಿ ಐಎಎಸ್‌ ಅಧಿಕಾರಿ ವಿರುದ್ದ ನೀಡಿದ ಅವಹೇಳನಕಾರಿ ಹೇಳಿಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಈ ಹಿಂದೆ ದೂರು ಸಲ್ಲಿಸಿದ್ದೇವು. ಈ ಬಾರಿ ರವಿಕುಮಾರ್‌ ಎಲ್ಲಾ ಅಂಕೆಗಳನ್ನು ಮೀರಿ ಮುಖ್ಯಕಾರ್ಯದರ್ಶಿಗಳ ಮೇಲೆ ಅಸಭ್ಯ ಹೇಳಿಕೆಯನ್ನು ನೀಡಿದ್ದಾರೆ. ಇದು ಕೇವಲ ವ್ಯಕ್ತಿಗತ ಅಪಮಾನವಲ್ಲ. ಇಡೀ ಆಡಳಿತ ಯಂತ್ರದ ಶಿಸ್ತು ಮತ್ತು ಐಎಎಸ್‌ ಸೇವೆಯ ಗೌರವಕ್ಕೆ ಮಾಡಿದ ಅಪಹಾಸ್ಯವಾಗಿದೆ. ಈ ಬಗ್ಗೆ ರಾಜ್ಯಪಾಲರು ಸ್ವಯಂಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ರವಿಕುಮಾರ್‌ ವಿರುದ್ಧ ವಿಧಾನಸೌದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜೆಪಿನಗರದ ನಿವಾಸಿ, ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 351(3)(ಅನೈತಿಕತೆಯ ಆರೋಪ), 75(3) (ಅಶ್ಲೀಲ ಹೇಳಿಕೆ), 79(ಮಹಿಳೆಯ ಮಾನಕ್ಕೆ ಕುಂದು ತರುವ ಉದ್ದೇಶದಿಂದ ಪ್ರಯೋಗಿಸಲಾದ ಪದ) ಅಡಿ ಪ್ರಕರಣ ದಾಖಲಾಗಿದೆ.

ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಎನ್ ರವಿಕುಮಾರ್ ಅವರಿಂದ ವಿವರಣೆ ಕೋರಿದ್ದಾರೆ. ರವಿಕುಮಾರ್ ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಶಾಲಿನಿ ರಜನೀಶ್ ಬಗ್ಗೆ ಬಹಳ ಗೌರವ ಇದೆ. ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿಲ್ಲ. ಆಕ್ಷೇಪಾರ್ಹ ಹೇಳಿಕೆ ನೀಡಿದರೆ ನಾನು ನೇಣು ಹಾಕಿಕೊಳ್ಳುತ್ತೇನೆಂದು ಹೇಳಿದ್ದಾರೆ.

ರವಿಕುಮಾರ್  ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಯನ್ನು ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘವು ತೀವ್ರವಾಗಿ ಖಂಡಿಸಿದೆ.

Related Posts

Leave a Reply

Your email address will not be published. Required fields are marked *