ಬೆಂಗಳೂರು: ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಭಯೋತ್ಪಾದಕರ ಕುಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ದೇಶದ ಪರಾಕ್ರಮ ಮೆರೆದಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ಮಟ್ಟ ಹಾಕಲು ನಮ್ಮ ಭಾರತೀಯ ಸೇನೆಯು ನಡೆಸಿರುವ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ನಡೆಸುವ ಮೂಲಕ ಶಕ್ತಿ ಪ್ರದರ್ಶನದ ಜೊತೆಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಈ ಮೂಲಕ ಭಯೋತ್ಪಾದನೆ ಮೂಲಕ ಭಾರತದ ಶಾಂತಿಗೆ ಧಕ್ಕೆ ತರಲು ಯತ್ನಿಸಿದರೆ ಉಳಿಗಾಲ ಇಲ್ಲ ಎಂಬ ಸಂದೇಶವನ್ನೂ ಪಾಕಿಸ್ತಾನಕ್ಕೆ ರವಾನಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಶಾಂತಿಪ್ರಿಯ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ಭಯೋತ್ಪಾದಕರನ್ನು ಹುಟ್ಟಡಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮತ್ತ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಬಲ ಸೂಚಿಸುತ್ತದೆ ಎಂದು ಬೈರತಿ ಸುರೇಶ್ ಹೇಳಿದ್ದಾರೆ.
ದೇಶದ ಸಾರ್ವಭೌಮತೆಗೆ ಚ್ಯುತಿ ಉಂಟು ಮಾಡುವಂತಹ ಯಾವುದೇ ಶಕ್ತಿಯನ್ನು ಭಾರತೀಯರಾದ ನಾವು ಸಹಿಸುವುದಿಲ್ಲ. ನಿರಂತರ ಹೋರಾಟ ನಡೆಸುವ ಮೂಲಕ ಇಂತಹ ಶಕ್ತಿಗಳನ್ನು ನಿರ್ಮೂಲನೆ ಮಾಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಬೈಯೋತ್ಪಾದಕರ 9 ನೆಲೆಗಳ ಮೇಲೆ ದಾಳಿ ನಡೆಸಿ ನಾಶಪಡಿಸಲಾಗಿದ್ದು, ಈ ಮೂಲಕ ನಮ್ಮ ಸೇನೆ ಅಮಾಯಕರ ಸಾವು ನೋವುಗಳನ್ನು ತಪ್ಪಿಸಿದ್ದಾರೆ. ಅತ್ಯಂತ ಚಾಣಾಕ್ಷ್ಯತನದಿಂದ ಈ ದಾಳಿಯನ್ನು ನಡೆಸಿರುವ ಪ್ರತಿಯೊಬ್ಬ ಸೈನಿಕನಿಗೂ ನಾನು ನಮ್ಮ ಸರ್ಕಾರದ ಪರವಾಗಿ ಮತ್ತು ನನ್ನ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.