ಕರಾಚಿ: ಪಾಕಿಸ್ತಾನದ ಸಂಭವಿಸಿದ ಲಘು ಭೂಕಂಪನದ ಲಾಭ ಪಡೆದ ಕರಾಚಿ ಜೈಲಿನಲ್ಲಿದ್ದ 200ಕ್ಕೂ ಅಧಿಕ ಕೈದಿಗಳು ಪರಾರಿಯಾಗಿದ್ದಾರೆ.
ಸೋಮವಾರ ರಾತ್ರಿ ಪಾಕಿಸ್ತಾನದಲ್ಲಿ 16 ಬಾರಿ ಲಘು ಭೂಕಂಪನ ಸಂಭವಿಸಿದೆ. ಈ ವೇಳೆ ಕರಾಚಿಯ ಮಲಿರ್ ಜೈಲಿನಲ್ಲಿದ್ದ 216 ಕೈದಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಸತತವಾಗಿ ಲಘು ಭೂಕಂಪನ ಸಂಭವಿಸಿದ್ದರಿಂದ ಪೊಲೀಸ್ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಾಗ ಆತಂಕದ ವಾತಾವರಣ ಸೃಷ್ಟಿಸಿದ ಕೈದಿಗಳು ಪರಾರಿಯಾಗಿದ್ದಾರೆ.
ಮಲಿರ್ ಜೈಲಿನ ಸಮೀಪದ 40 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದ್ದು, ರಿಕ್ಟರ್ ಮಾಪಕದಲ್ಲಿ ಕನಿಷ್ಠ 2.6 ಮತ್ತು ಗರಿಷ್ಠ 2.8ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.
ಕೈದಿಗಳು ಪರಾರಿಯಾಗುತ್ತಿರುವ ಮಾಹಿತಿ ಲಭಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿಗಳು ಗುಂಡು ಹಾರಿಸಿ ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ, ರಸ್ತೆಯಲ್ಲಿ ದಿಕ್ಕಾಪಾಲಾಗಿ ಕೈದಿಗಳು ಓಡಿ ಹೋಗುತ್ತಿರುವ ವೀಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಭೂಕಂಪನ ಸಂಭವಿಸಿದಾಗ ಸುಮಾರು 600ಕ್ಕೂ ಹೆಚ್ಚು ಕೈದಿಗಳು ಬಂಧಿಖಾನೆಯಿಂದ ಹೊರಗೆ ಇದ್ದರು. ಇದರಲ್ಲಿ 216 ಮಂದಿ ಭೂಕಂಪನದ ಗದ್ಧಲದ ನಡುವೆ ಸಮಯ ಸಾಧಿಸಿ ಪರಾರಿಯಾಗಿದ್ದಾರೆ.