ದೇಶದ ಇತರ ನಗರಗಳ ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿ ನಾಯಕರು ಕೂಡ ಸರ್ಕಾರದ ಈ ಕ್ರಮವನ್ನು ಟೀಕಿಸಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ #RevokeMetroFareHike ಅಭಿಯಾನ ಆರಂಭಿಸಿದ್ದಾರೆ.
ಕರ್ನಾಟಕ ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಬದಲು ಮೆಟ್ರೋ ದರ ಹೆಚ್ಚಳದ ಮೂಲಕ ಅದಕ್ಕೆ ತದ್ವಿರುದ್ಧವಾಗಿ ಕಾರ್ಯ ನಿರ್ವಹಿಸು ತ್ತಿದೆ. ಬೆಂಗಳೂರು ಮೆಟ್ರೋ ಪ್ರಯಾಣದರ ದೇಶದ ಇತರ ಮೆಟ್ರೋಗಳಿಗೆ ಸಮನಾಗಿರಬೇಕು. ದೆಹಲಿಯಲ್ಲಿ ಪ್ರಯಾಣಿಕರು 12 ಕಿ.ಮೀ ಪ್ರಯಾಣಕ್ಕೆ 30 ರೂ. ಪಾವತಿಸಿದರೆ, ಬೆಂಗಳೂರಿನಲ್ಲಿ 60 ರೂ. ಪಾವತಿಸಬೇಕಾಗುತ್ತದೆ. ಗರಿಷ್ಠ ದರವನ್ನು 60 ರಿಂದ 90 ರೂ.ಗಳಿಗೆ ಹೆಚ್ಚಿಸಿರುವುದು ನ್ಯಾಯ ಸಮ್ಮತವಲ್ಲ. ದೇಶದ ಬೇರೆ ಯಾವುದೇ ಮೆಟ್ರೋ ಇಷ್ಟು ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ. 60 ರೂ.ಗಿಂತ ಹೆಚ್ಚಿನ ದರ ಏರಿಕೆ ತುಂಬಾ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಪ್ರತಿದಿನ ಮೂರ್ನಾಲ್ಕು ಬಾರಿ ಮೆಟ್ರೋದಲ್ಲಿ ಪ್ರಯಾಣಿಸುವವರು ಇನ್ಮುಂದೆ ಮೆಟ್ರೋ ಪ್ರಯಾಣ ಆಗಲ್ಲ, ಬಸ್ ನಮ್ಮ ಆಯ್ಕೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಈ ಪ್ರಮಾನದ ದರ ಏರಿಕೆ ಖಂಡಿಸಿದ್ದು, ಮೆಟ್ರೋ ದರ ನಿಗದಿಯಲ್ಲಿ ಪಾರದರ್ಶಕತೆ ಇರುವ ಜೊತೆಗೆ ದರ ನಿಗದಿ ಸಮಿತಿ ವರದಿಯನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದ್ದಾರೆ. ಪ್ರಯಾಣಿಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬಿಎಂಆರ್‌ಸಿಎಲ್ ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ಪರಿಚಯಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕೋಲ್ಕತ್ತಾ ಮೆಟ್ರೋ ಅತ್ಯಂತ ಅಗ್ಗದ ಪ್ರಯಾಣವನ್ನು ನೀಡುತ್ತದೆ. ಅಲ್ಲಿ ಕನಿಷ್ಠ 5 ರೂ. ಮತ್ತು ಗರಿಷ್ಠ 50 ರೂ. ಪ್ರಯಾಣ ದರ, 25 ಕಿ.ಮೀ. ಮೀರಿ 30 ಕಿ.ಮೀ.ವರೆಗಿನ ಪ್ರಯಾಣಕ್ಕೆ ಗರಿಷ್ಠ 25 ರೂ. ಇದೆ. ಚೆನ್ನೈ ಮೆಟ್ರೋ 25 ಕಿ.ಮೀ.ಗೆ 50 ರೂ., ದೆಹಲಿ ಮೆಟ್ರೋ 60 ರೂ., ಬೆಂಗಳೂರು ಮೆಟ್ರೋದ ಹೊಸ ದರ 90 ರೂ. ಆಗಿದೆ.