ಏರಿಕೆ ಮಾಡಲಾಗಿರುವ ಮೆಟ್ರೋ ರೈಲು ದರದಲ್ಲಿ ಇಳಿಕೆ ಮಾಡುವುದಿಲ್ಲ. ಆದರೆ ಸ್ಟೇಜ್ ಹಂತಗಳಲ್ಲಿ ಅಡ್ಜೆಸ್ಟ್ ಮೆಂಟ್ ಮೂಲಕ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಕುಸಿತ ಉಂಟಾಗಿದ್ದು, ಖಾಲಿ ಹೊಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಟ್ರೋ ದರ ಕಡಿಮೆ ಮಾಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹೇಶ್ವರ್, ಮೆಟ್ರೋ ದರದಲ್ಲಿ ಇಳಿಕೆ ಮಾಡುವುದಿಲ್ಲ. ಆದರೆ ಕೆಲವು ಕಡೆ ಶೇ.60ರಿಂದ 100ರಷ್ಟು ಏರಿಕೆ ಆಗಿರುವುದರಿಂದ ಉಂಟಾಗಿರುವ ಗೊಂದಲ ಬಗೆಹರಿಸಲಾಗುವುದು ಎಂದರು.
ಸೋಮವಾರದಿಂದ ಮೆಟ್ರೋ ರೈಲು ದರ ಏರಿಕೆ ಜಾರಿ ಮಾಡಲಾಗಿದೆ. ಕೆಲವು ಕಡೆ ಮೆಟ್ರೋದ ಶೇ.100ರಿಂದ 200ರಷ್ಟು ಏರಿಕೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಅಡ್ಜೆಸ್ಟ್ ಮೆಂಟ್ ಮಾಡಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದರು.
ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಆಗಿರುವುದು ನಿಜ. ಅಧಿಕಾರಿಗಳು ಮತ್ತೆ ದರ ನಿಗದಿ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಸಿಎಂ ಸೂಚನೆ ಮೇರೆಗೆ ಕಡಿಮೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಅವರು ವಿವರಿಸಿದರು.
ನಾವು ಗರಿಷ್ಠ ೫೧ರಷ್ಟು ದರ ಏರಿಕೆಗೆ ಪ್ರಸ್ತಾಪ ಮಾಡಿದ್ದೇವು. ಒಟ್ಟಾರೆ ಶೇ.೪೬ರಷ್ಟು ಏರಿಕೆ ಮಾಡಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ಶೇ.60ರಷ್ಟು ಏರಿಕೆ ಕಂಡು ಬಂದಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆದಿದೆ. ಇದನ್ನು ಪರಿಗಣಿಸಿ ಪರಿಶೀಲನೆ ನಡೆಸಿ ಪರಿಷ್ಕೃತ ದರ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.