ತುಮಕೂರಿನ ಮೆಗ್ಗಾನ್ ಆಸ್ಪತ್ರೆ ಕ್ವಾರ್ಟಸ್‌ನಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ತನ್ನ ಹನ್ನೊಂದು ವರ್ಷದ ಮಗಳನ್ನು ಕೊಲೆ ಮಾಡಿದ ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 11 ವರ್ಷದ ಪೂರ್ವಿಕ ಕೊಲೆಯಾಗಿರುವ ಮಗು, 38 ವರ್ಷದ ಶೃತಿ ಮಗಳ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡವರು.
ಮಾನಸಿಕ ಅಸ್ವಸ್ಥರಾಗಿದ್ದ ಶೃತಿಯವರು ಮಗಳು ಪೂರ್ವಿಕಾ ಮಲಗಿದ್ದಾಗ ಅವಳ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮಗಳ ಮೃತ ದೇಹದ ಮೇಲೆ ನಿಂತುಕೊಂಡು ಅಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶೃತಿ ಮೆಗ್ಗಾನ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್ ರಾಮಣ್ಣ ಎಂಬವರ ಪತ್ನಿ. ಈ ದುರಂತ ನಡೆದ ಸಮಯದಲ್ಲಿ ಪತಿ ರಾಮಣ್ಣ ನೈಟ್ ಶಿಫ್ಟ್ ಡ್ಯೂಟಿಯಲ್ಲಿದ್ದರು. ಅವರು ಬೆಳಗ್ಗೆ ಡ್ಯೂಟಿ ಮುಗಿಸಿ ಮನೆಗೆ ಮರಳಿದಾಗ ಮನೆಯ ಬಾಗಿಲು ತೆರೆಯದ ಕಾರಣ ಕಿಟಕಿಯ ಮೂಲಕ ನೋಡಿದ್ದಾರೆ. ಆಗ ಈ ದುರಂತ ಬೆಳಕಿಗೆ ಬಂಇದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾನಸಿಕವಾಗಿ ಆರೋಗ್ಯ ಸಮಸ್ಯೆಯಿದ್ದ ಶೃತಿ ಕೆಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೆಂದು ತಿಳಿದುಬಂದಿದೆ. ದುರಂತ ನಡೆಯುವ ಮೊದಲು ಮಗಳು ಪೂರ್ವಿಕಾ ತಂದೆಗೆ ಕರೆ ಮಾಡಿ, ಅಮ್ಮ ಒಂದು ರೀತಿ ಆಡ್ತಿದ್ದಾರೆ ಎಂದು ತಿಳಿಸಿದ್ದಳು. ಆಗ ರಾಮಣ್ಣ, ಬೆಳಿಗ್ಗೆ ಬರ್ತೀನಿ ಎಂದು ಮಗಳಿಗೆ ಹೇಳಿದ್ದರು. ಆದರೆ ಅದೇ ರಾತ್ರಿ ಈ ಘಟನೆ ನಡೆದು ಹೋಗಿದೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.