ಋತುಚಕ್ರ ರಜೆ ನೀತಿ ಕುರಿತು, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ಅಶೋಕ್ ಬಿ ಹಿಂಚಿಗೇರಿ ಅವರೊಂದಿಗೆ ಚರ್ಚೆ ನಡೆಸಿದರು.
ಸಚಿವರ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಈ ಭೇಟಿ ನಡೆಯಿತು. ಋತುಚಕ್ರ ರಜೆ ನೀತಿಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯನ್ವಯ ಖಾಸಗಿ ಮತ್ತು ಸರ್ಕಾರ ವಲಯಗಳಲ್ಲಿ ದುಡಿಯುವ ಉದ್ಯೋಗಸ್ಥ ಮಹಿಳೆಯರು ತಿಂಗಳಲ್ಲಿ ಒಂದು ದಿನ ಋತುಚಕ್ರ ರಜೆಯನ್ನು ಪಡೆಯಬಹುದಾಗಿದೆ. ಇದು ವೇತನ ಸಹಿತ ರಜೆಯಾಗಿದೆ.
ಋತುಚಕ್ರ ರಜೆಯನ್ನು ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರ್ಕಾರ ಕಾನೂನು ಮಾಡಿದರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಹೇಳಿದರು.
ಸರ್ಕಾರದ ಕಾನೂನನ್ನು ಎಲ್ಲರೂ ಅನುಷ್ಠಾನ ಮಾಡಬೇಕು, ಪಾಲಿಸಲೇ ಬೇಕು. ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೇ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು ಎಂದು ಸಚಿವರು ಈಗಾಗಲೇ ಹೇಳಿದ್ದಾರೆ.
ಈ ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು. ಹೆಣ್ಣು ಮಕ್ಕಳ ಸಮಸ್ಯೆಯನ್ನು ಕಂಪನಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ನೀತಿಯು 2025ರಿಂದ ಜಾರಿಗೆ ಬರಲಿದ್ದು, ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳು ಮತ್ತು ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ರಜೆಯ ಸೌಲಭ್ಯ ಸಿಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅಂಗೀಕಾರ ನೀಡಲಾಗಿದೆ. ಮಹಿಳೆಯರ ಆರೋಗ್ಯ ಮತ್ತು ಕೆಲಸದ ಸ್ಥಳದಲ್ಲಿ ಅವರಿಗೆ ಬೇಕಾದ ವಿಶ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.