ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ಋತುಚಕ್ರ ರಜೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು ಹೋಟೆಲ್‌ಗಳ ಸಂಘವು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸಂಘದ ಪರ ವಕೀಲ ಪ್ರಶಾಂತ್ ಬಿ.ಕೆ ಅವರ ವಾದ ಆಲಿಸಿದ ಹೈ ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ಪ್ರಕಟಿಸಿದೆ.
ರಾಜ್ಯದಲ್ಲಿ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸಬೇಕು ಎಂದು ಕಾರ್ಮಿಕ ಇಲಾಖೆ ನವೆಂಬರ್‌ನಲ್ಲೇ ಆದೇಶ ಹೊರಡಿಸಿದೆ.
18ರಿಂದ 52ರ ವಯೋಮಾನದ ಎಲ್ಲ ಕಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಈ ಸೌಲಭ್ಯ ನೀಡಬೇಕು ಎಂದು ಎಲ್ಲ ಉದ್ಯೋಗದಾತರಿಗೂ ಸೂಚಿಸಿದೆ. ಈ ಸಂಬಂಧ ಸರ್ಕಾರ 2024ರ ಜನವರಿ 12ರಂದು ಅಧಿಸೂಚನೆ ಹೊರಡಿಸಿತ್ತು. ಕಾರ್ಮಿಕ ಇಲಾಖೆ ಆಯುಕ್ತರು 21/02/2025ರಂದು ಪತ್ರ ಬರೆದಿದ್ದರು. 9/10/2025ರಂದು ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು.
ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ. ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಒದಗಿಸುವ ಅವಶ್ಯಕತೆ ಇರುವುದಿಲ್ಲ. 52 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ರಜೆಯ ಸೌಲಭ್ಯ ಇಲ್ಲ.


