Wednesday, January 28, 2026
Menu

ಧಾರವಾಡ ಹಾಸ್ಟೆಲ್‌ನಲ್ಲಿ ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (DIMHANS)ಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್‌ನಲ್ಲಿ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಡಾ. ಪ್ರಜ್ಞಾ ಪಾಲೇಗರ್ (24) ಆತ್ಮಹತ್ಯೆ ಮಾಡಿಕೊಂಡವರು.

ಡಾ. ಪ್ರಜ್ಞಾ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮನೋವೈದ್ಯಶಾಸ್ತ್ರ ವಿಭಾಗದ ಪ್ರಥಮ ವರ್ಷದ ಪಿಜಿ ವಿದ್ಯಾರ್ಥಿನಿಯಾಗಿ ಎರಡು ವಾರಗಳ ಹಿಂದಷ್ಟೇ ವ್ಯಾಸಂಗ ಆರಂಭಿಸಿದ್ದರು.  ಡಾ. ಪ್ರಜ್ಞಾ ಅವರ ಪೋಷಕರು ಮಗಳನ್ನು ಭೇಟಿಯಾಗಲು ಮಂಗಳವಾರ ಧಾರವಾಡಕ್ಕೆ ಆಗಮಿಸಿದ್ದರು. ಮಗಳೊಂದಿಗೆ ಸಮಯ ಕಳೆದು ರಾತ್ರಿ ಶಿವಮೊಗ್ಗಕ್ಕೆ ಮರಳಿದ್ದರು. ಪೋಷಕರು ಊರಿಗೆ ಹಿಂತಿರುಗಿದ ಕೆಲವೇ ಗಂಟೆಗಳಲ್ಲೇ ಈ ದುರ್ಘಟನೆ ಸಂಭವಿಸಿರುವುದು ಹಲವು ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಕಾರಣ ವಾಗಿದೆ.

ಡಾ. ಪ್ರಜ್ಞಾ ಅವರು ಸಹಪಾಠಿ ಡಾ. ಪ್ರಿಯಾ ಪಾಟೀಲ್ ಅವರೊಂದಿಗೆ ಹಾಸ್ಟೆಲ್‌ನ ಒಂದೇ ಕೊಠಡಿಯನ್ನು ಹಂಚಿಕೊಂಡಿದ್ದರು. ಪೋಷಕರು ಬಂದಿದ್ದ ಹಿನ್ನೆಲೆ ಆ ದಿನ ಸಹಪಾಠಿ ಪ್ರಿಯಾ ಅವರು ಬೇರೆಡೆ ತಂಗಿದ್ದರು. ರಾತ್ರಿ ವೇಳೆ ಕೊಠಡಿಯಲ್ಲಿ ಒಬ್ಬರೇ ಇದ್ದ ಪ್ರಜ್ಞಾ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿ ಬೆಳಿಗ್ಗೆ ಪತ್ತೆಯಾಗಿದ್ದಾರೆ. ರೂಮಿಗೆ ಮರಳಿದ ಪ್ರಿಯಾ ಗಮನಿಸಿ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯಾಭ್ಯಾಸದ ಒತ್ತಡ, ಮಾನಸಿಕ ಒತ್ತಡ ಅಥವಾ ವೈಯಕ್ತಿಕ ಕಾರಣಗಳಿರಬಹುದೇ ಎಂಬ ಎಲ್ಲಾ ಅಂಶಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

 

Related Posts

Leave a Reply

Your email address will not be published. Required fields are marked *