ನಾನು ದೆಹಲಿ ಒಂದು ಸುತ್ತು ಬಂದೆ. ಅಲ್ಲಿ ಎಷ್ಟು ರಸ್ತೆಗುಂಡಿಗಳಿವೆ ಹಾಗೂ ಪ್ರಧಾನಮಂತ್ರಿಗಳ ನಿವಾಸದ ರಸ್ತೆಯಲ್ಲಿಯೇ ಎಷ್ಟು ರಸ್ತೆಗುಂಡಿಗಳಿವೆ ಎಂಬುದನ್ನು ಮಾಧ್ಯಮದವರು ಪರಿಶೀಲಿಸಬೇಕು. ಕರ್ನಾಟಕದ ಬಗ್ಗೆ ಮಾತ್ರ ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬೆಂಗಳೂರಿನಲ್ಲಿ ಪಾಲಿಕೆವಾರು ಇನ್ನೂರು ಗುಂಡಿಗಳಂತೆ ಪ್ರತಿದಿನ 1 ಸಾವಿರ ರಸ್ತೆಗುಂಡಿಗಳನ್ನು ನಗರದಾದ್ಯಂತ ಮುಚ್ಚಲಾಗುತ್ತಿದೆ. ಮಳೆಯ ನಡುವೆಯೂ ನಾವು ಕೆಲಸದಲ್ಲಿ ತೊಡಗಿದ್ದೇವೆ ಎಂದು ಡಿಸಿಎಂ ಹೇಳಿದರು.
ಇದು ಇಡೀ ದೇಶದಾದ್ಯಂತ ಇರುವ ಸಮಸ್ಯೆ. ಕೇವಲ ಕರ್ನಾಟಕದ ಬಗ್ಗೆ ಮಾತ್ರ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಎಲ್ಲಾ ಕಡೆಯೂ ಈ ಸಮಸ್ಯೆಯಿದೆ ಎಂದು ದೊಡ್ಡ ದೊಡ್ಡ ಐಟಿ ಕಂಪೆನಿಗಳು ಸೇರಿದಂತೆ ಎಲ್ಲರಿಗೂ ಹೇಳುತ್ತಿದ್ದೇನೆ. ರಸ್ತೆಗುಂಡಿ ಮುಚ್ಚುವ ವಿಚಾರವಾಗಿ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.
ಬಿಜೆಪಿ ಕಾಲದಿಂದಲೂ ರಸ್ತೆಗಳನ್ನು ಚೆನ್ನಾಗಿ ಮಾಡಿಕೊಂಡು ಬಂದಿದ್ದರೆ ಇಂತಹ ಪರಿಸ್ಥಿತಿ ಏಕೆ ಬರುತ್ತಿತ್ತು, ಅವರುಗಳು ಯಾರೂ ಮಾಡಲಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದೆ ಎಂದು ಕಾಣುತ್ತದೆ ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದರು.
ಬಿಹಾರ ಭೇಟಿ ವಿಚಾರ ಕೇಳಿದಾಗ, ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಬುಧವಾರ ಆಯೋಜಿಸಲಾಗಿದೆ. ಮುಖ್ಯಮಂತ್ರಿಯವರು ಸಂಜೆ ಆಗಮಿಸುತ್ತಾರೆ ಎಂದು ಹೇಳಿದರು.