ಗೊಂದಲ, ಗದ್ದಲ, ಸರ್ವರ್ ಸಮಸ್ಯೆಗಳು ಹಾಗೂ ವಿರೋಧದ ಮಧ್ಯೆ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದ ರಾಜಕೀಯ ಜಟಾಪಟಿ ತೀವ್ರವಾಗಿದೆ. ಈ ಹಿನ್ನಲೆಯಲ್ಲಿ ಸಚಿವ ಎಂ. ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನಾನು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ನಮೂದಿಸುತ್ತೇನೆ ಎಂದು ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಎಂ.ಬಿ. ಪಾಟೀಲ್ ಅವರು ಜಾತಿ ಗಣತಿ ವಿವಾದ ಮತ್ತು ವಿರೋಧ ಪಕ್ಷದ ಪ್ರತಿಕ್ರಿಯೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ಪ್ರೇರೇಪಿಸಿದ ಸ್ವಾಮೀಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಪ್ರತಾಪ್ ಸಿಂಹ ತಮ್ಮದು ತಾವು ನೋಡಿಕೊಳ್ಳಲಿ. ಬಸವಣ್ಣವರು ಯಾಕೆ ಲಿಂಗವನ್ನು ಕೈಯಲ್ಲಿ ಕೊಟ್ಟರು? ಆ ಕಾಲದಲ್ಲಿ ಬಹಳಷ್ಟು ಜನರಿಗೆ ದೇವಸ್ಥಾನಕ್ಕೆ ಹೋಗಲು ಅವಕಾಶ ಇರಲಿಲ್ಲ. ದೇಹವೇ ದೇಗುಲ, ನೀನೇ ದೇವ, ನಿನ್ನ ದೇಹವೇ ದೇಗುಲ ಎಂದರು. ಆದರೆ, ಪ್ರತಾಪ್ ಸಿಂಹಗೆ ಅಷ್ಟು ಕೂಡ ಗೊತ್ತಿಲ್ಲ ಎಂದರೆ ಹೇಗೆ?’ ಎಂದು ಪ್ರಶ್ನಿಸಿದರು.
‘ಪ್ರತ್ಯೇಕ ಧರ್ಮ ಎಂದು ಕಾವಿ ಹಾಕಿಕೊಂಡು ನಾಲ್ಕು ಸ್ವಾಮೀಜಿಗಳು ಓಡಾಡುತ್ತಿದ್ದಾರೆ. ಹಾಗಾದರೆ, ನಿಮ್ಮ ಧರ್ಮದ ದೇವರು ಯಾರು’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕೆಲ ದಿನಗಳ ಹಿಂದೆ ಪ್ರಶ್ನೆ ಮಾಡಿದ್ದರು.
ಬಸವಣ್ಣವರು ಯಾಕೆ ಬಸವ ಧರ್ಮವನ್ನು ಸ್ಥಾಪಿಸಿದರು? ಕೆಲವೊಂದು ವ್ಯತ್ಯಾಸಗಳು ಇದ್ದವು: ಅಸ್ಪೃಶ್ಯತೆ, ಅಸಮಾನತೆ, ಅನಿಷ್ಟ ಪದ್ದತಿಗಳು ಹಾಗೂ ಮೂಢನಂಬಿಕೆಗಳು. ಇದಕ್ಕಾಗಿ ಎಲ್ಲಾ ಕಾಯಕ ಸಮಾಜವನ್ನ ಒಟ್ಟುಗೂಡಿಸಿ ಅನುಭವ ಮಂಟಪ ಮಾಡಿದರು. ಆದರೆ, ಪ್ರತಾಪ್ ಸಿಂಹಗೆ ಅಷ್ಟು ಕೂಡ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.
ವೀರಶೈವರು ಮತ್ತು ಲಿಂಗಾಯತರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದೇ ಇದೆ. ವೀರಶೈವರೇ ಬೇರೆ, ಲಿಂಗಾಯಿತರೇ ಬೇರೆ. ವೀರಶೈವರು ಹಿಂದೂ ಧರ್ಮದ ಒಂದು ಭಾಗ. ಬಸವಣ್ಣ ಶ್ರೇಷ್ಠ ಶೈವ, ನಮ್ಮ ಜಿಲ್ಲೆಯಿಂದ ಬಂದವರು. ನಾನು ಬಸವಣ್ಣನ ಜಿಲ್ಲೆಯವನು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರುವುದು ಸಹಜ ಎಂದರು.
ಬ್ರಾಹ್ಮಣರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇಲ್ಲವೇ? ಅವರಲ್ಲೂ ನೂರಾ ಎಂಟು ಪಂಗಡಗಳಿವೆ, ನಮ್ಮಲ್ಲೂ ವೀರಶೈವ, ಲಿಂಗಾಯತ ಬೇರೆ ಬೇರೆ ಪಂಗಡಗಳಿವೆ. ವೀರಶೈವ ಆಚರಣೆ ಬೇರೆ, ಲಿಂಗಾಯತ ಆಚರಣೆ ಬೇರೆ. ನಾವೆಲ್ಲರೂ ಲಿಂಗಾಯತರು; ವೀರಶೈವ ಅದರ ಒಂದು ಭಾಗ ಅಷ್ಟೇ ಎಂದು ತಿಳಿಸಿದರು.
ಮೈಸೂರು ಸಮೀಕ್ಷೆಯಲ್ಲಿ, ಮದ್ರಾಸ್ ಸಮೀಕ್ಷೆಯಲ್ಲಿ ಲಿಂಗಾಯತರು ಚತುರ್ವರ್ಣದ ಭಾಗವಲ್ಲ ಎಂದು ದಾಖಲಾಗಿದೆ. ಜೈನರು, ಸಿಖ್‌ಗಳು ಹೇಗೋ ಹಾಗೆಯೇ ಲಿಂಗಾಯತರು. ಮದ್ರಾಸ್ ಸಮೀಕ್ಷೆಯಲ್ಲಿ ಶೈವರು, ವೈಷ್ಣವರು, ಲಿಂಗಾಯತರು ಅಂತ ದಾಖಲಾಗಿದೆ. ಹಾಗಾಗಿ ನಾನು ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತಲೇ ಬರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳು ಧರ್ಮ ಕಾಲಂನಲ್ಲಿ ಏನು ಬರೆಯುತ್ತೀರಿ ಎಂದು ಕೇಳಿದಾಗ, ನಾನು ಬಸವಣ್ಣನವರ ಅನುಯಾಯಿ, ಯಾವತ್ತಿದ್ದರೂ ಲಿಂಗಾಯತ ಎಂದೇ ಬರೆಯುತ್ತೇನೆ; ದೊಡ್ಡ ಚರ್ಚೆಗೆ ಹೋಗುವುದಿಲ್ಲ. ಸ್ವಾತಂತ್ರ್ಯ ನಂತರ ಇಂಡಿಕ್ ರಿಲೀಜಿಯನ್ಸ್‌ಗೆ ಮಾನ್ಯತೆ ಸಿಕ್ಕಿದೆ. ಜೈನರಿಗೆ ಯುಪಿಎ ಸರ್ಕಾರದ ಅವಧಿಯಲ್ಲೇ ಮಾನ್ಯತೆ ಸಿಕ್ಕಿದೆ ಎಂದು ವಿವರಿಸಿದರು.