ಶತಕ ವಂಚಿತ ನಾಯಕ ಮಯಾಂಕ್ ಅಗರ್ ವಾಲ್ ಭರ್ಜರಿ ಪ್ರದರ್ಶನದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಹರಿಯಾಣ ವಿರುದ್ಧ ಬೃಹತ್ ಮೊತ್ತದತ್ತ ಸಾಗಿದೆ.
ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಗೆ 267 ರನ್ ಗಳಿಸಿದೆ.
ಮೊದಲ ವಿಕೆಟ್ ಗೆ ಅನಿಶ್ (17) ಮತ್ತು ಮಯಾಂಕ್ 46 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ನಂತರ ಕೆಎಲ್ ರಾಹುಲ್ ಮತ್ತು ಮಯಾಂಕ್ ಎರಡನೇ ವಿಕೆಟ್ ಗೆ 53 ರನ್ ಪೇರಿಸಿದರು.
ಕೆಎಲ್ ರಾಹುಲ್ ಉತ್ತಮ ಆರಂಭದ ಮೂಲಕ ಭರವಸೆ ಮೂಡಿಸಿದರೂ 37 ಎಸೆತಗಳಲ್ಲಿ 4 ಬೌಂಡರಿ ಸಹಿತ 26 ರನ್ ಗಳಿಸಿದ್ದಾಗ ಔಟಾಗಿ ನಿರಾಸೆ ಮೂಡಿಸಿದರು. ಮಯಾಂಕ್ 149 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 91 ರನ್ ಬಾರಿಸಿದ್ದಾಗ ಔಟಾಗಿ 9 ರನ್ ಗಳಿಂದ ಶತಕ ವಂಚಿತರಾದರು.
ದೇವದತ್ ಪಡಿಕಲ್ 93 ಎಸೆತಗಳಲ್ಲಿ 4 ಬೌಂಡರಿ ಸೇರಿದ 43 ರನ್ ಗಳಿಸಿದರೆ. ರವಿಚಂದ್ರನ್ ಸ್ಮರಣ್ 35 ರನ್ ಬಾರಿಸಿ ಔಟಾದರು. ಹರಿಯಾಣ ಪರ ಅನುಜ್ ತಕ್ರಲ್ 74 ರನ್ ಗೆ 2 ವಿಕೆಟ್ ಪಡೆದು ಗಮನ ಸೆಳೆದರು.